ಜಿಲ್ಲೆ

ಸಿಂಥೆಟಿಕ್ ಟ್ರಾೃಕ್ ಶೀಘ್ರ ಬಳಕೆಗೆ

reportermys


8.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ : ನನಸಾಗಲಿದೆ ಕ್ರೀಡಾಪಟುಗಳ ಕನಸು

ಹಾಸನ: ರಾಜಕೀಯವಾಗಿ ಹೆಸರು ಮಾಡಿರುವ ಹಾಸನ ಜಿಲ್ಲೆಯ ಕ್ರೀಡಾ ಸಾಧನೆ ಹೇಳಿಕೊಳ್ಳುವಂತಿಲ್ಲ. ಕ್ರಿಕೆಟ್ ತಾರೆ ಜಾವಗಲ್ ಶ್ರೀನಾಥ್ ಹಾಸನ ಜಿಲ್ಲೆಯವರೇ ಆದರೂ ಅವರು ಅಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ. ಪ್ಯಾರಾ ಒಲಿಂಪಿಕ್‌ನಲ್ಲಿ ಜಿಲ್ಲೆಯ ಗಿರೀಶ್ ಅವರು ಪದಕ ಗಳಿಸಿ ಸಾಧನೆ ಮಾಡಿದ್ದರೂ ಅದರಲ್ಲಿ ಜಿಲ್ಲೆಯ ಕೊಡುಗೆ ಕಡಿಮೆ. ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಜಿಲ್ಲೆಯ ಕ್ರೀಡಾ ಪ್ರತಿಭೆಗಳ ಹೆಸರು ಕೇಳಿ ಬರುವುದಿಲ್ಲ. ಅದಕ್ಕೆ ಸೂಕ್ತ ಮೂಲ ಸೌಲಭ್ಯ ಇಲ್ಲದಿರುವುದೂ ಕಾರಣ.

ಆದರೆ ಈಗ ಜಿಲ್ಲೆಯ ಚಿತ್ರಣ ಬದಲಾಗುತ್ತಿದೆ. ರಾಜ್ಯ ಮಾತ್ರವಲ್ಲ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಓಟದ ಸ್ಪರ್ಧೆಗೆ ಸಿದ್ಧಗೊಳ್ಳುವಂತಹ ಮೂಲ ಸೌಕರ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಾಣವಾಗುತ್ತಿದೆ. ಸುಮಾರು 8.25 ಕೋಟಿ ರೂ. ವೆಚ್ಚದ ಅತ್ಯಾಧುನಿಕ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಇನ್ನೇನು ಮುಗಿಯುವ ಹಂತಕ್ಕೆ ಬಂದಿದ್ದು ಶೀಘ್ರವೇ ಕ್ರೀಡಾಪಟುಗಳ ಬಳಕೆಗೆ ಲಭ್ಯವಾಗಲಿದೆ.

ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿರುವ ನಗರ ಹಾಗೂ ಜಿಲ್ಲೆಯ ಅದೆಷ್ಟೋ ಕ್ರೀಡಾಪಟುಗಳ ಸಿಂಥೆಟಿಕ್ ಟ್ರ್ಯಾಕ್ ಕನಸು, ಕಡೆಗೂ ನನಸಾಗುವ ಕಾಲ ಹತ್ತಿರವಾಗಿದೆ. ರಾಜ್ಯದಲ್ಲೇ 2ನೇ ಅತಿದೊಡ್ಡ ಕ್ರೀಡಾ ಮೈದಾನ ಎನಿಸಿಕೊಂಡಿರುವ ಹಾಸನ ಜಿಲ್ಲಾ ಕ್ರೀಡಾಂಗಣಕ್ಕೆ ಮತ್ತೊಂದು ಗರಿ ಸೇರಿಕೊಳ್ಳುತ್ತಿದೆ.

ಜಿಲ್ಲೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಓಟದ ಅಭ್ಯಾಸ ನಡೆಸುವ ಸಾಕಷ್ಟು ಕ್ರೀಡಾಪಟುಗಳು ಇದ್ದಾರೆ. ಸಿಂಥೆಟಿಕ್ ಟ್ರ್ಯಾಕ್ ಆಗಬೇಕು ಎಂಬುದು ಅವರ ಬಹುದಿನಗಳ ಕನಸಾಗಿತ್ತು. ಇದಕ್ಕಾಗಿ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದರು. ಈ ಮನವಿಗೆ ಸ್ಪಂದಿಸಿದ ಶಾಸಕ ಪ್ರೀತಂ ಜೆ.ಗೌಡ ಅವರು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಿಂಥೆಟಿಕ್ ಟ್ರಾೃಕ್ ಕಾಮಗಾರಿಗೆ ಮಂಜೂರಾತಿ ಪಡೆದುಕೊಂಡರು. ಒಂದೂವರೆ ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಆರಂಭವಾದ ಕಾಮಗಾರಿ ಮಳೆ ಇತ್ಯಾದಿ ಅಡೆ-ತಡೆಗಳ ನಡುವೆಯೂ ಇದೀಗ ಶೇ.95 ರಷ್ಟು ಪೂರ್ಣಗೊಂಡಿದೆ. ಮಾರ್ಕಿಂಗ್ ಮತ್ತಿತರ ಸಣ್ಣಪುಟ್ಟ ಕಾಮಗಾರಿಗಳಷ್ಟೇ ಬಾಕಿ ಉಳಿದಿವೆ.

ಸ್ವಿಜರ್‌ಲ್ಯಾಂಡ್ ಸಾಮಗ್ರಿಗಳು:
ಸಿಂಥೆಟಿಕ್ ಟ್ರಾೃಕ್ ನಿರ್ಮಾಣಕ್ಕಾಗಿ ದೂರದ ಸ್ವಿಜಲ್ಯಾಂಡ್‌ನಿಂದ ಪೂರಕ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಅವುಗಳ ಅಳವಡಿಕೆ ಕಾರ್ಯ ಬಹುತೇಕ ಮುಗಿದಿದೆ. ಈ ಹಿಂದೆ ಇದ್ದ ಪಥದಲ್ಲೇ 400 ಮೀಟರ್ ಉದ್ದದ ಎಂಟು ಸ್ಪರ್ಧಿಗಳು ಒಟ್ಟಿಗೇ ಓಡಬಹುದಾದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಗಳನ್ನು ಆಯೋಜನೆ ಮಾಡಬಹುದಾದಷ್ಟು ಉತ್ಕೃಷ್ಟ ಟ್ರಾೃಕ್ ನಿರ್ಮಾಣ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಬೇಕೆಂಬ ಸ್ಥಳೀಯ ಕ್ರೀಡಾಪಟುಗಳ ಗುರಿ ಸಾಧನೆಗೆ ವೇದಿಕೆ ಸಜ್ಜಾಗಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ದರ್ಜೆಯ ಹಾಸನಾಂಬ ಒಳಾಂಗಣ ಕ್ರೀಡಾಂಗಣ ಇದೆ. ಈಗ ಸಿಂಥೆಟಿಕ್ ಟ್ರಾೃಕ್ ಸಹ ನಿರ್ಮಾಣಗೊಂಡಿರುವುರಿಂದ ಜಿಲ್ಲೆಯಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸುವಷ್ಟು ಸೌಲಭ್ಯ ಅಭಿವೃದ್ಧಿ ಆದಂತಾಗಿದೆ.

ಫುಟ್‌ಬಾಲ್ ಪಟು ಪ್ರೀತಂಗೌಡ ಒತ್ತಾಸೆ:
ಸ್ವತಃ ಫುಟ್‌ಬಾಲ್ ಕ್ರೀಡಾಪಟು ಆಗಿರುವ ಶಾಸಕ ಪ್ರೀತಂಗೌಡ ಅವರು, ಹಲವು ಕ್ರೀಡಾಸ್ಪರ್ಧೆಗಳಿಗೆ ಕ್ರೀಡಾಂಗಣಗಳನ್ನು ಒಂದೇ ಪ್ರಾಂಗಣದಲ್ಲಿ ಅಣಿಗೊಳಿಸಿರುವುದು ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಕೇಂದ್ರ ಸರ್ಕಾರದ 8.25 ಕೋಟಿ ರೂ. ಜೊತೆಗೆ ರಾಜ್ಯ ಸರ್ಕಾರದ 5 ಕೋಟಿ ರೂ. ನೆರವಿನಿಂದ ಲೈಟಿಂಗ್, ಸುತ್ತಲೂ ಚರಂಡಿ, ರಸ್ತೆ, ನಡಿಗೆ ಪಥ ಹಾಗೂ ಸುತ್ತಲೂ ಬೇಲಿ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಬ್ಯಾಡ್ಮಿಂಟನ್ ಕೋರ್ಟ್ ಅಭಿವೃದ್ಧಿಗೆ 5 ಲಕ್ಷ ರೂ., ಖೋಖೋ ಮತ್ತು ಕಬಡ್ಡಿ ಮೈದಾನಗಳಿಗೆೆ ತಲಾ ಎರಡೂವರೆ ಲಕ್ಷ ರೂ., ಫುಟ್‌ಬಾಲ್ ಮೈದಾನಕ್ಕೆ 5 ಲಕ್ಷ ರೂ. ನೆರವು ನೀಡಿದ್ದಾರೆ.

‘‘ಹಾಸನ ಜಿಲ್ಲಾ ಕ್ರೀಡಾಂಗಣವನ್ನು ಬೆಂಗಳೂರು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬುದು ನನ್ನ ಮಹದಾಸೆ. ಮುಂದೆ ಹಾಕಿ ಮತ್ತು ಫುಟ್‌ಬಾಲ್ ಕ್ರೀಡಾಂಗಣಗಳನ್ನು ಟರ್ಫ್ ಮೈದಾನಗಳನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೂ ಕೂಡ ಶೀಘ್ರ ಸಾಕಾರವಾಗಲಿದೆ.’’
ಪ್ರೀತಂ ಜೆ.ಗೌಡ, ಶಾಸಕ, ಹಾಸನ
‘‘ರಾಜ್ಯದ ಮಟ್ಟದ ಟ್ರಾೃಕ್‌ಗಳಲ್ಲಿ ಐದು ಜನ ಮಾತ್ರ ಓಡಬಹುದು. ಹಾಸನ ಕ್ರೀಡಾಂಗಣದಲ್ಲಿ ನಿರ್ಮಾಣವಾಗುತ್ತಿರುವುದು 8 ಜನ ಓಡಬಹುದಾದ ಅಂತಾರಾಷ್ಟ್ರೀಯ ಗುಣಮಟ್ಟದ ಸಿಂಥೆಟಿಕ್ ಟ್ರಾೃಕ್. ಕಾಮಗಾರಿ ಬಹುತೇಕ ಮುಗಿದಿದ್ದು, ಮಾರ್ಕಿಂಗ್ ಕೆಲಸ ಬಾಕಿ ಉಳಿದಿದೆ. ಇನ್ನು ಒಂದೂವರೆ ತಿಂಗಳಲ್ಲಿ ಕೆಲಸ ಪೂರ್ಣಗೊಂಡು ಓಟಗಾರರ ಅಭ್ಯಾಸಕ್ಕೆ ಲಭ್ಯವಾಗಲಿದೆ.’’
ಸಿ.ಕೆ. ಹರೀಶ್, ಸಹಾಯಕ ನಿರ್ದೇಶಕ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ.