ಮೈಸೂರು: ಮಾಜಿ ಎಂಎಲ್ಸಿ ಸಿ.ರಮೇಶ್ ಅವರನ್ನು ಸಂಸದ ವಿ. ಶ್ರೀನಿವಾಸ ಪ್ರಸಾದ್ ತೇಜೋವಧೆ ಮಾಡಿರುವುದು ದಲಿತ ಎಡಗೈ ಸಮಾಜಕ್ಕೆ ಮಾಡಿದ ಅವಮಾನ ಎಂದು ತಿ. ನರಸೀಪುರ ಪುರಸಭೆ ಸದಸ್ಯ ಅರ್ಜುನ್ ರಮೇಶ್ ಹರಿಹಾಯ್ದರು.
ತಿ. ನರಸೀಪುರದಲ್ಲಿ ಬುಧವಾರ ನಡೆದಿದ್ದ ವಿ. ಶ್ರೀನಿವಾಸಪ್ರಸಾದ್-ಸಿ. ರಮೇಶ್ ನಡುವಿನ ವಾಗ್ವಾದ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ರಮೇಶ್ ಅವರ ಪುತ್ರ ಅರ್ಜುನ್, ಪ್ರಸಾದ್ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.
ಅಹಿತಕರ ಘಟನೆಗೆ ತಿ. ನರಸೀಪುರ ತಾಲೂಕು ಆಡಳಿತದ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿ ಕಾರಣ. ಕಾರ್ಯಕ್ರಮ ನಡೆದ ಸ್ಥಳ ನಾನು ಪ್ರತಿನಿಧಿಸುತ್ತಿರುವ ವಾರ್ಡ್ ವ್ಯಾಪ್ತಿಯಲ್ಲಿದೆ. ನನ್ನ ತಂದೆ ಹಾಗೂ ನನ್ನ ಹೆಸರನ್ನು ಒಂದೇ ಮಾದರಿಯಲ್ಲಿ ಮುದ್ರಿಸಲಾಗಿದೆ. ಆ ಮೂಲಕ ಶಿಷ್ಟಾಚಾರ ಬದಿಗೊತ್ತಿದ್ದರು. ಈ ವಿಚಾರವನ್ನು ನನ್ನ ತಂದೆ ಅಧಿಕಾರಿಗಳ ಬಳಿ ಪ್ರಶ್ನಿಸಿದರು. ಆದರೆ ಆ ವೇಳೆ ಮಧ್ಯ ಪ್ರವೇಶಿಸಿದ ಪ್ರಸಾದ್ ಅವರು ನನ್ನ ತಂದೆಯ ವಿರುದ್ಧ ಹರಿಹಾಯ್ದಿದ್ದಾರೆ ಎಂದು ಕಿಡಿಕಾರಿದರು.
ಮೊದಲಿನಿಂದಲೂ ನನ್ನ ತಂದೆಯನ್ನು ತುಳಿಯುವ ಕೆಲಸವನ್ನು ಪ್ರಸಾದ್ ಮಾಡುತ್ತ ಬಂದಿದ್ದಾರೆ. ಅಲ್ಲದೆಮ ಅವರು ದಲಿತ ಎಡಗೈ ಸಮಾಜವನ್ನು ತುಳಿದುಕೊಂಡೇ ಬಂದಿದ್ದಾರೆ. ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲಿ ಒಬ್ಬರನ್ನಾದರೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಶಾಸಕರನ್ನಾಗಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಪ್ರಸಾದ್ ಅವರ ಪರವಾಗಿ ಹಗಲು-ರಾತ್ರಿ ಕೆಲಸ ಮಾಡಿದ್ದೇವೆ. ತೇಜೋವಧೆ ಮಾಡುವುದು ಸುಲಭ. ಆದರೆ ಕೆಲಸವನ್ನು ಸ್ಮರಿಸಿಕೊಳ್ಳುವುದು ಕಷ್ಟ ಎಂದು ಕುಟುಕಿದರು.
ಪ್ರಸಾದ್ ಅವರು ಕ್ಷಮೆ ಕೇಳಬೇಕೆಂದು ಹೇಳುವಷ್ಟು ಹಿರಿಯನಲ್ಲ. ಈ ವಿಚಾರವಾಗಿ ತಂದೆಯವರೊಂದಿಗೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ನಾಯಕರ ನಡುವಿನ ಗೊಂದಲವನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಆಗ್ರಹಿಸಿದರು.
ಪ್ರಸಾದ್ ಅವರು ಸಂಸದರಾಗಿ ಆಯ್ಕೆಯಾದ ಬಳಿಕ ಕೇವಲ 3 ಸಲ ತಿ.ನರಸೀಪುರಕ್ಕೆ ಬಂದಿದ್ದಾರೆ. ನಮ್ಮ ತಾಲೂಕಿಗೆ ಅವರ ಕೊಡುಗೆ ಏನೆಂಬುದನ್ನು ಕುರಿತು ಜನರನ್ನು ಕೇಳುವುದು ಉತ್ತಮ ಎಂದು ಪ್ರತಿಕ್ರಿಯಿಸಿದರು.
ಮಾಜಿ ಎಂಎಲ್ಸಿ ಸಿ. ರಮೇಶ್ ಮತ್ತು ಪುರಸಭೆ ಸದಸ್ಯನಾದ ನನಗೆ ಒಂದೇ ಆಹ್ವಾನ ಪತ್ರಿಕೆಯಲ್ಲಿ ಹೆಸರು ಬರೆದು ನೀಡುವುದನ್ನು ಖಂಡಿಸಿ ಸೋಮವಾರದಿಂದ ಪ್ರತಿಭಟನೆ ನಡೆಸುತ್ತೇನೆ. ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುವವರೆಗೂ ಇದು ಮುಂದುವರಿಯಲಿದೆ ಎಂದು ತಿಳಿಸಿದರು.
ತಿ.ನರಸೀಪುರ ಕ್ಷೇತ್ರದಿಂದ ನನ್ನ ತಂದೆ ಆಕಾಂಕ್ಷಿ. ಜತೆಗೆ, ಸ್ಥಳೀಯರನ್ನು ಬಿಟ್ಟು ಹೊರಗಿನವರಿಗೆ ಟಿಕೆಟ್ ಕೊಡಬಾರದೆಂದು ಮನವಿ ಮಾಡಿದ್ದೇನೆ. ಆದರೆ ಪ್ರಸಾದ್ ಅವರು ತಮ್ಮ ಮಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆಂದು ಜನರು ಮಾತನಾಡುತ್ತಿದ್ದಾರೆ. ಈ ಕಾರಣದಿಂದಲೂ ನನ್ನ ತಂದೆ ವಿರುದ್ಧ ಸಿಟ್ಟಾಗಿರಬಹುದು ಎಂದರು.
ಮುಖಂಡ ಪುಟ್ಟಣ್ಣ ಮಾತನಾಡಿ, ಸಿ. ರಮೇಶ್ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರೆ ಹೊರುತ ಪ್ರಸಾದ್ ಅವರನ್ನಲ್ಲ. ಅಷ್ಟಕ್ಕೆ ಅವರು ಏಕವಚನದಲ್ಲಿ ಮಾತಾಡಿದ್ದು ಅಕ್ಷಮ್ಯ. ಇದರಿಂದ ಮನಸ್ಸಿಗೆ ನೋವಾಗಿದ್ದು, ಸಂಸದರಿಗೆ ಈ ರೀತಿಯ ವರ್ತನೆ ಶೋಭೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.