ಯಳಂದೂರು : ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸತತ 4 ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ದಾಖಲೆ ಸೃಷ್ಟಿಸಿರುವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನು ನೀಡಬೇಕು ಎಂದು ಯಳಂದೂರು ತಾಲೂಕು ಸಿ.ಪುಟ್ಟರಂಗಶೆಟ್ಟಿ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಯರಿಯೂರು ಕಿರಣ್ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಉಪ್ಪಾರ ಜನಾಂಗದ ಏಕೈಕ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಸಮುದಾಯದ ಜನಾಂಗವನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷವನ್ನು ಹಲವು ಕಡೆ ಗೆಲುವಿನ ದಡ ಸೇರಿಸಿದ್ದಾರೆ. ಅಲ್ಲದೆ ಉಪ್ಪಾರ ಸಮಾಜ ಮತದಾರರು ಹೆಚ್ಚು ಇರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಪುಟ್ಟರಂಗಶೆಟ್ಟಿ ಅವರ ಶ್ರಮ ಇದೆ.
2008ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ ಇವರು ನಿರಂತರವಾಗಿ ಶಾಸಕರಾಗಿ 4 ಬಾರಿ ಗೆದ್ದಿದ್ದಾರೆ. ಅಲ್ಲದೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ಬರಲು ಕಾರಣರಾಗಿದ್ದಾರೆ. ಕ್ಷೇತ್ರದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲು, ಸಿಮ್ಸ್ ಸ್ಥಾಪನೆಗೆ, ಚಾಮುಲ್ ಸೇರಿದಂತೆ ಅನೇಕ ಜನಪರ ಶಾಶ್ವತವಾದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇಂದು ಸಾವಿರಾರು ಮಂದಿಗೆ ಇದರಿಂದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗಿದೆ.
ಉಪ್ಪಾರ ಸಮುದಾಯದ ಜನರು ರಾಜ್ಯಾದ್ಯಂತ ಲಕ್ಷಾಂತರ ಮಂದಿ ಇದ್ದಾರೆ. ಹಾಗಾಗಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಉಪ್ಪಾರ ಜನರಿಗೂ ಸಾಮಾಜಿಕ ನ್ಯಾಯ ಒದಗಿಸಬೇಕು. ನಮ್ಮ ಬಳಗದ ವತಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರನ್ನು ಶೀಘ್ರದಲ್ಲೇ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಬಳಗದ ಉಪಾಧ್ಯಕ್ಷ ರಂಗರಾಜು, ಹೊನ್ನೂರು ನಂಜುಂಡ, ಪರಶಿವ, ಚೇತನ್, ಶೇಖರ್, ಸಿದ್ದು, ಆನಂದ್, ರಾಘವೇಂದ್ರ, ಕೆಸ್ತೂರು ಹರೀಶ್, ಕೆಸ್ತೂರು ಪವನ್, ಹೊನ್ನೂರು ಸಿದ್ದೇಶ್, ರಘು, ಇರಸವಾಡಿ ಮಹೇಶ್, ಕೃಷ್ಣಾಪುರ ರಾಜಣ್ಣ, ಯರಗಂಬಳ್ಳಿ ಸೋಮೇಶ್, ವೈ.ಕೆ.ಮೋಳೆ ಯೋಗಾನಂದ, ಕಂದಹಳ್ಳಿ ಮಹೇಶ್ ಇದ್ದರು.