ಜಿಲ್ಲೆ

ಸಿ.ಪಿ. ಯೋಗೇಶ್ವರ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ

ಹಾಸನ: ಚನ್ನಪಟ್ಟಣದಲ್ಲಿ ಕೆಲವರು ನಾನೆ ಗೆದ್ದು ಬಿಡುತ್ತೇನೆ ಎಂಬ ಭ್ರಮೆಯಲ್ಲಿದ್ದರೂ, ನಿಖಿಲ್ ಅವರು ನಾಮಪತ್ರ ಸಲ್ಲಿಸಿದ ಮೇಲೆ ಅವರ ಬ್ಯಾಟರಿ ಡೌನ್ ಆಗಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಹಾಸನಂಬೆ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಗೆದ್ದೇ ಬಿಡುತ್ತೇವೆ ಎಂಬ ಭ್ರಮೆಯಲ್ಲಿದ್ದರೂ ಆದರೆ, ಈಗ ಅವರಿಗೆ ವಾಸ್ತವ ಅರಿವುವಾಗಿದೆ. ದಿನೇ ದಿನೇ ಎನ್‌ಡಿಎ ಅಭ್ಯರ್ಥಿ ಪರ ಅಲೆ ಸೃಷ್ಟಿಯಾಗುತ್ತಿದೆ ಎಂದು ಹೇಳಿದರು.

ಅತಿಥಿಗಳು ಮನೆಗೆ ಬಂದಾಗ ಗೌರವಯುತವಾಗಿ ನಡೆಸಿಕೊಳ್ಳಬೇಕು. ಮನೆಯಿಂದ ಹೊರಹೋದ ಮೇಲೆ ಅದರ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಯೋಗೇಶ್ವರ್ ಅವರಿಗೆ ಟಾಂಗ್ ನೀಡಿದರು.

ಈ ಬಾರಿ ರಾಜ್ಯದಲ್ಲಿ ನಡೆಯುತ್ತಿರುವ ಮೂರು ಉಪಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ನಿಖಿಲ್, ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ, ಸಂಡೂರಿನಲ್ಲಿ ಬಂಗಾರು ಹನುಮಂತು ಅವರು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಈ ಬಾರಿ ವಿಶೇಷವಾಗಿ ಸಂಡೂರಿನಲ್ಲಿ ಹಿಂದೆ ಬಿಜೆಪಿ ಗೆಲುವು ಸಾಧಿಸಲಿಲ,್ಲ ಈ ಬಾರಿ ಐತಿಹಾಕ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಲಿದೆ ಎಂದರು.

ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಎರಡು ಪಕ್ಷಗಳು ಕೂಡ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಚನ್ನಪಟ್ಟಣದಲ್ಲಿ ಡಿಕೆಶಿ ವರ್ಸಸ್ ಕುಮಾರಸ್ವಾಮಿ ಚುನಾವಣೆ ಎಂಬ ಪ್ರಶ್ನೆಗೆ ಅಲ್ಲ ಆದರೆ, ನಮ್ಮ ಉದ್ದೇಶ ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಮುಖ್ಯ ಎಂದು ಹೇಳಿದರು.

ರೈತರ ಭೂಮಿಯನ್ನು ಕಬಳಿಸಲು ವಕ್ಫ್ ಬೋರ್ಡ್‌ನಿಂದ ನೋಟಿಸ್ ನೀಡಲಾಗುತ್ತಿದೆ. ಈ ಸಂಬಂಧ ಸಂಸದ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಮಂಗಳವಾರ ವಿಜಯಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಲಿದೆ ಎಂದು ಹೇಳಿದರು.

ಹಿಂದೆ ಬ್ರಿಟಿಷರು ಒಡೆದು ಆಳುವ ನೀತಿಯನ್ನ ಅನುಸರಿಸುತ್ತಿದ್ದರು. ಈಗ ಅದೇ ಮಾದರಿಯಲ್ಲಿ ಕಾಂಗ್ರೆಸ್ ಕುತಂತ್ರದ ರಾಜಕಾರಣವನ್ನ ಮಾಡುತ್ತಿದೆ. ಸಚಿವ ಜಮೀರ್ ಅಹಮದ್ ಅವರ ಬಾಯಲ್ಲಿ ಸಂವಿಧಾನದ ಹೆಸರಲ್ಲಿಕೊಂಡು ಅಧಿಕಾರಕ್ಕೆ ಬಂದ ಅವರು ಇದೀಗ ಸಂವಿಧಾನಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜಮೀರ್ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ:

ವಕ್ಫ್ ಬೋರ್ಡ್ ಮೂಲಕ ರೈತರ ಭೂಮಿಯನ್ನು ಕಸಿದುಕೊಳ್ಳಲು ಹುನ್ನಾರ ನಡೆಸಲು ಸಚಿವ ಜಮೀರ್ ಅಹ್ಮದ್ ಅವರು ಬೆಂಕಿ ಹಚ್ಚಿರುವ ಬೆಂಕಿ ಈಗ ರಾಜ್ಯ ವ್ಯಾಪಿ ಹರಡುತ್ತಿದ್ದು, ಇದನ್ನ ನಿಲ್ಲಿಸಲು ಕಾಂಗ್ರೆಸ್ ಸರ್ಕಾರಕ್ಕೆ ಆಗುವುದಿಲ್ಲ ಎಂದು ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.

ರಾಜ್ಯದಲ್ಲಿ ಬೇಲಿಯೇ ಎದ್ದು ಹೊಲ ಮೇದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಅಶಾಂತಿ ಮೂಡಿಸುವ ನಿಟ್ಟಿನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಹಲವಾರು ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡು ಬಂದ ಜಾಗವನ್ನು ಕಸಿದುಕೊಳ್ಳಲು ವಕ್ಫ್ ಬೋರ್ಡ್ ತೀರ್ಮಾನಿಸಿದ್ದು, ಇದಕ್ಕೆ ಸಚಿವ ಜಮೀರ್ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದರು.

ಪಕ್ಷವನ್ನ ಶುದ್ಧೀಕರಣ:

ಬಿಜೆಪಿಯಲ್ಲಿ ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ,

ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಿಕೊಂಡು ಬರುತ್ತಿದ್ದವರನ್ನು ಒಬ್ಬೊಬ್ಬರಾಗಿ ಪಕ್ಷದಿಂದ ಹೊರಹಾಕಲಾಗುತ್ತಿದೆ. ಪಕ್ಷವನ್ನ ಶುದ್ಧೀಕರಣ ಮಾಡಲಾಗುತ್ತಿದ್ದು ಹಿರಿಯರ ಆಸೆಆಗಿತ್ತು. ಅವರ ಆಶಯದಂತೆ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರು ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಅಸಮಾಧಾನವನ್ನು ಹೊರಹಾಕಲು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಡಬೇಕು. ಆ ನಿಟ್ಟಿನಲ್ಲಿ ಯೋಚಿಸುತ್ತಿದ್ದವೆ. ನಾನು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಮಾಡಲು ಸಾಕಷ್ಟು ಕೆಲಸಗಳಿದೆ. ಆ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ ಗೌಡ, ಶಾಸಕರಾದ ಹುಲ್ಲಹಳ್ಳಿ ಸುರೇಶ್, ಸಿಮೆಂಟ್ ಮಂಜು ಸೇರಿದಂತೆ ಇತರರಿದ್ದರು