ಪಾಂಡವಪುರ: ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಜೆಡಿಎಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಕ್ಷೇತ್ರದಾದ್ಯಂತ ಹರಿದಾಡುತ್ತಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರೊಂದಿಗೆ ಒಂದೇ ವೇದಿಕೆ ಹಂಚಿಕೆಕೊಂಡಿರುವುದು ಇದಕ್ಕೆ ಮತ್ತಷ್ಟು ಇಂಬು ನೀಡಿದೆ.
ತಾಲೂಕಿನ ಕೆನ್ನಾಳು ಗೇಟ್ ಸಮೀಪದ ಸಂಪ್ರದಾಯ ಕನ್ವೇಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಲಯನ್ಸ್ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಜತೆಗೆ ಉಭಯ ಕುಶಲೋಪರಿ ವಿಚಾರಿಸಿಕೊಂಡು ಕಾರ್ಯಕ್ರಮ ಉದ್ಘಾಟಿಸಿದರು.
ಈ ಬೆಳವಣಿಗೆ ಮೇಲುಕೋಟೆ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಮನಸ್ಥಿತಿಯಿಂದಲೇ ಕಾಂಗ್ರೆಸ್ ಬೆಂಬಲಿತರಾಗಿ ಚುನಾಯಿತರಾಗಿರುವ ದರ್ಶನ್ ಪುಟ್ಟಣ್ಣಯ್ಯ ಅವರೊಂದಿಗೆ ಆತ್ಮೀಯತೆ ತೋರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗಿಂತಲೂ ಮುಂಚಿತವಾಗಿ ಆಗಮಿಸಿದ್ದ ಸಿ.ಎಸ್.ಪುಟ್ಟರಾಜು ಅವರು ದರ್ಶನ್ ಬಂದೊಡನೆ ಹಸ್ತಲಾಘವ ಮಾಡಿ ಮಾತುಕತೆ ನಡೆಸಿದರು. ಬಳಿಕ ದರ್ಶನ್‌ಗೆ ಮೇಣದ ಬತ್ತಿ ನೀಡಿ ಕೈಹಿಡಿದು ದೀಪ ಬೆಳಗಿಸಿದರು. 2018 ಮತ್ತು 2023ರ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದ ಇಬ್ಬರು ನಾಯಕರು ಒಮ್ಮೊಮ್ಮೆ ಗೆದ್ದಿದಾರೆ. ಈ ಹಿಂದೆ ಇಬ್ಬರಲ್ಲೂ ಈ ರೀತಿಯ ಆತ್ಮೀಯತೆ ಕಂಡು ಬಂದಿರಲಿಲ್ಲ. ಹೀಗಾಗಿ ಇಬ್ಬರ ನಡುವೆ ದಿಢೀರ್ ಹುಟ್ಟಿಕೊಂಡಿರುವ ಆತ್ಮೀಯತೆಯನ್ನು ಕ್ಷೇತ್ರದ ಮತದಾರರು ವಿಶ್ಲೇಷಿಸುತ್ತಿದ್ದು, ರಾಜಕೀಯ ಕಾರಣಕ್ಕೆ ಈ ಬೆಳವಣಿಗೆಗಳು ನಡೆಯುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ಮೂರು ತಿಂಗಳುಗಳ ಕಾಲ ಆಜ್ಞಾತವಾಗಿದ್ದರು. ಯಾವುದೇ ಸಭೆ ಸಮಾರಂಭಗಳಿಗೂ ಹಾಜರಾಗಿರಲಿಲ್ಲ. ಕಾಂಗ್ರೆಸ್ ಸೇರ್ಪಡೆ ವಿಚಾರ ಮುನ್ನೆಲೆಗೆ ಬಂದಾಗಿನಿಂದ ಚುನಾವಣಾ ಸೋಲಿನ ನೋವು ಮರೆತು ಎಲ್ಲೆಡೆ ಹೊಸ ಹುಮ್ಮಸ್ಸಿನಿಂದ ಓಡಾಡುತ್ತಿದ್ದಾರೆ. ಜತೆಗೆ ಮಾಜಿ ಶಾಸಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಹರಿದಾಡುತ್ತಿದ್ದರೂ, ಸಿ.ಎಸ್.ಪುಟ್ಟರಾಜು ಮಾಧ್ಯಮದ ಮೂಲಕ ಗೊಂದಲಗಳಿಗೆ ಸ್ಪಷ್ಟನೆ ಕೊಡಲು ಮುಂದಾಗಿಲ್ಲ.