ಚನ್ನರಾಯಪಟ್ಟಣ: ಕರ್ನಾಟಕ ರಾಜ್ಯ ಸಹಕಾರ ಸಕ್ಕರೆ ಮಂಡಳಿ ಅಧ್ಯಕ್ಷರಾಗಿ ಸಿ.ಎನ್.ವೆಂಕಟೇಶ್(ಶುಭ ವೆಂಕಟೇಶ್) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಸಹಕಾರ ಸಕ್ಕರೆ ಮಂಡಳಿಯ ಕೇಂದ್ರ ಕಚೇರಿಯಲ್ಲಿ ರಾಜ್ಯ ಸಹಕಾರ ಸಕ್ಕರೆ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ತಾಲೂಕಿನ ಶ್ರೀನಿವಾಸಪುರ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಸಿ.ಎನ್.ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾದರು.
ರಾಜ್ಯದ 13 ಸಹಕಾರ ಸಕ್ಕರೆ ಕಾರ್ಖಾನೆಗಳ ಒಕ್ಕೂಟವಾದ ಕರ್ನಾಟಕ ರಾಜ್ಯ ಸಹಕಾರ ಸಕ್ಕರೆ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. 13 ನಿರ್ದೇಶಕರ ಪೈಕಿ ಚನ್ನರಾಯಪಟ್ಟಣ ತಾಲೂಕಿನ ಶ್ರೀನಿವಾಸಪುರ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಎನ್.ವೆಂಕಟೇಶ್(ಶುಭ ವೆಂಕಟೇಶ್) ಅವರು ಅಧ್ಯಕ್ಷ ಸ್ಥಾನಕ್ಕೂ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುಲ್ಬರ್ಗ ಮೂಲದ ನಿರ್ದೇಶಕರು ನಾಮಪತ್ರ ಸಲ್ಲಿಸಿದ್ದರು. ಇವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಬಾಳಪ್ಪ ಅಂದಿಗುಡ್ಡ ಅವರು ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಸಿ.ಎನ್.ವೆಂಕಟೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು. ನೂತನ ಅಧ್ಯಕ್ಷರು, ಮತ್ತು ಉಪಾಧ್ಯಕ್ಷರನ್ನು ಎಲ್ಲ ನಿದೇಶಕರು ಅಭಿನಂದಿಸಿದರು.
ನೂತನ ಅಧ್ಯಕ್ಷರಾದ ಸಿ.ಎನ್.ವೆಂಕಟೇಶ್ ಮಾತನಾಡಿ, ಇದೇ ಪ್ರಥಮ ಬಾರಿಗೆ ದಕ್ಷಿಣದ ಜಿಲ್ಲೆಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಇದಕ್ಕೆ ಕಾರಣರಾದ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಧ್ಯಮದವರಿಗೆ ತಿಳಿಸಿದರು.
ರಸಗೊಬ್ಬರದ ದುಬಾರಿ ದರ, ಸೂಕ್ತ ಮಳೆ ಇಲ್ಲದೆ ಕಬ್ಬು ಬೆಳೆಯುವುದೇ ದುರ್ಬಲವಾಗಿದೆ. ಈ ನಿಟ್ಟಿನಲ್ಲಿ ಅಧ್ಯಕ್ಷನಾಗಿ ರಾಜ್ಯದ ಕಬ್ಬು ಬೆಳೆಗಾರರ ಹಿತ ಕಾಯುವುದು ನನ್ನ ಜವಾಬ್ದಾರಿಯಾಗಿದೆ. ಕಬ್ಬಿಗೆ ಸೂಕ್ತ ಬೆಲೆ ನಿಗದಿ, ರಸಗೊಬ್ಬರ ದರ ಇಳಿಕೆ ಕುರಿತಾಗಿ ಕೇಂದ್ರ ಮಂಡಳಿಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಹೋರಾಟ ನಡೆಸುವುದಾಗಿ ಹೇಳಿದರು.