ಚಿತ್ರದುರ್ಗ: ಸಾಹಿತ್ಯಾಧ್ಯಯನ ಮಾಡದ ಪತ್ರಕರ್ತ ನೀರಿಲ್ಲದ ಬಾವಿಯಂತೆ ಎಂದು ವಿಜಯವಾಣಿ ಪತ್ರಿಕೆ ಚಿತ್ರದುರ್ಗ ಆವೃತ್ತಿ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿರುವ ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯಾಭಿರುಚಿ ಶಿಬಿರದ 2 ದಿನ ಶನಿವಾರದ ಸಂಪಾದಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಿಕೋದ್ಯಮ ವಿಷಯವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದರೂ ಬರವಣಿಗೆ ಕೌಶಲ, ವ್ಯಾಕರಣ, ವಾಕ್ಯಜೋಡಣೆಗಳ ತಿಳಿವಳಿಕೆ ಇರದಿದ್ದರೆ ಪ್ರಯೋಜನವಿಲ್ಲ. ಈ ಜ್ಞಾನಕ್ಕೆ ಸಾಹಿತ್ಯದ ಓದು ಸಾಕಷ್ಟು ನೆರವಾಗುತ್ತದೆ. ಪತ್ರಿಕಾ ವರದಿಗಳಲ್ಲಿ ಊಹೆಗಳಿಗೆ ಅವಕಾಶವಿಲ್ಲ. ವಿಶೇಷ ಲೇಖನಗಳನ್ನು ಸಾಕಷ್ಟು ಮುಂಚಿತವಾಗಿ ಪತ್ರಿಕಾಲಯಗಳಿಗೆ ಕಳಿಸಿಕೊಡಬೇಕಾಗುತ್ತದೆ ಎಂದರು.
ಪತ್ರಕರ್ತ ಮಹಾಬಲೇಶ್ವರಭಟ್ ಮಾತನಾಡಿ, ಪತ್ರಿಕೆ ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನಿಷ್ಠ 3-4 ವರ್ಷಗಳ ಕಾಲ ಕೆಲಸ ಮಾ ಡಿದರೆ ವೃತ್ತಿಗೊಂದು ಗಂಭೀರತೆ ಬರುತ್ತದೆ. ಉದ್ಯೋಗ ಕೊಟ್ಟವರಲ್ಲೂ ನಂಬಿಕೆ ಉಳಿಯುತ್ತದೆ. ಪತ್ರಿಕಾ ವೃತ್ತಿ ಸುಲಭವಲ್ಲ. ಗಡಿಯಾರ ನೋಡಿ ಮಾಡುವಂಥ ಕೆಲಸ ಇದಲ್ಲ. ಭ್ರಮೆಗಳೊಂದಿಗೆ ಈ ವೃತ್ತಿಗೆ ಸೇರಬೇಡಿ ಎಂದರು.
ಇಲ್ಲಿ ಅನೇಕ ಸವಾಲುಗಳಿವೆ. ಸಾಹಿತ್ಯದ ಓದು ಈ ವೃತ್ತಿಗೆ ಪೂರಕ, ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದವರಿಗೆ ಇತರೆ ಕ್ಷೇತ್ರಗಳಲ್ಲಿ ಅನುವಾದಕರಿಗೆ ಅಪಾರ ಬೇಡಿಕೆ ಇದೆ. ಕ್ರೀಡಾ ವರದಿಗಾರರಿಗೂ ಸಾಕಷ್ಟು ಅವಕಾಶಗಳಿವೆ. ಪತ್ರಕರ್ತರಿಗೆ ಅನುಮಾಗಳಿದ್ದರೆ ನೈಜತೆ ಗೊತ್ತಾಗುತ್ತದೆ. ವಿಶೇಷ ಲೇಖನಗಳಿಗೆ ಹಳಸಲು ವಸ್ತು ಬೇಡ ಎಂದರು.
ಪತ್ರಕರ್ತ ಸಿದ್ದಯ್ಯಹಿರೇಮಠ ಮಾತನಾಡಿ, ಸಾಹಿತ್ಯ ಮತ್ತು ಇತಿಹಾಸದ ಅರಿವು ಪತ್ರಕರ್ತರಾಗಲು, ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ನೆರವಾಗುತ್ತದೆ. ಸಾಹಿತ್ಯ ಪದ, ಜ್ಞಾನದ ವಿಸ್ತಾರವನ್ನು ಹೆಚ್ಚಿಸುತ್ತದೆ. ನಾನಾ ವಿಷಯಗಳ ಬಗ್ಗೆ ಸಾಕಷ್ಟು ತಿಳಿವಳಿಕೆ ಇರಬೇಕು. ಭಾಷೆ, ಪತ್ರಿಕಾ ಪರಿಭಾಷೆ ಕಲಿಯಲು ದಿನಪತ್ರಿಕೆಗಳ, ಸಾಹಿತ್ಯದ ಓದು ಅಗತ್ಯ ಎಂದರು.
ಸಮಾನತೆ
ತತ್ವಪದಗಳು ಸಮಾನತೆ ಆಶಯಕ್ಕೆ ಅಪಾರ ಕೊಡುಗೆ ನೀಡಿವೆ ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯ ಪ್ರೊ.ಜೆ. ಕರಿಯಪ್ಪ ಮಾಳಿಗೆ ಹೇಳಿದರು.
ಶಿಬಿರದ ಮೊದಲ ದಿನದ ಗೋಷ್ಠಿ,‘ಕೀರ್ತನೆ, ತತ್ವಪದ ಹಾಗೂ ಸಾಂಗತ್ಯ’ ಕುರಿತು ಮಾತನಾಡಿ, 15ನೇ ಶತಮಾನದ ಶಿವಯೋಗಿಗಳ ಕೈವಲ್ಯ ಸಾಹಿತ್ಯ ಮತ್ತು 17-18ನೇ ಶತಮಾನದ ತತ್ವಪದ ಸಾಹಿತ್ಯದ ಅನುಭಾವಿಗಳು ಭಕ್ತಿಯನ್ನು ಲೋಕದೃಷ್ಟಿಯನ್ನಾಗಿ ಮಾಡಿಕೊಂಡು ಸಾಮಾಜಿಕ ಸೌಹರ್ದತೆಗೆ ಕಾರಣೀಭೂತರಾಗಿದ್ದಾರೆ. ನಾಥ, ಸಿದ್ಧ, ಆರೂಢ, ಅವಧೂತ, ಸಂತ ಮತ್ತು ಶರಣ ಪರಂಪರೆಯವರು ಮಾನವೀಯ ಮೌಲ್ಯಗಳನ್ನು ತಮ್ಮ ನಡೆ-ನುಡಿಯಲ್ಲಿ ಅನುಸರಿಸುತ್ತಾ ಸಾಹಿತ್ಯ ರಚನೆ ಮಾಡಿದ್ದಾರೆ ಎಂದರು.
ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ ಮಾತನಾಡಿ, ಪತ್ರಕರ್ತರಾದವರು ಯಾವ ಸುದ್ದಿಯನ್ನೂ ಅಮುಖ್ಯವೆಂದು ಪರಿಗಣಿಸಬಾರದು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ. ದಿನೇಶ ಗೌಡಗೆರೆ, ಪತ್ರಕರ್ತ ಚಳ್ಳಕೆರೆ ಯರ‌್ರಿಸಾಮಿ ಇತರರು ಇದ್ದರು.