ಜಿಲ್ಲೆ

ಸಾಹಿತ್ಯದಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ

ಬೇಲೂರು: ಪ್ರಸ್ತುತ ದಿನಗಳಲ್ಲಿ ಶಾಲೆಗಳ ಪಠ್ಯದೊಂದಿಗೆ ಸಾಹಿತ್ಯ, ವಿಚಾರ ಕಮ್ಮಟಗಳನ್ನು ಏರ್ಪಡಿಸಿದರೆ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಸೃಜನಶೀಲತೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಅಭಿಪ್ರಾಯಪಟ್ಟರು.


ಬೇಲೂರು ಪಟ್ಟಣದ ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಾಲೂಕು ಜನಪದ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಸಾಹಿತಿ ಸೋಂಪುರ ಪ್ರಕಾಶ್ ಅವರ ಹಳಿ ತಪ್ಪಿದ ಬದುಕು ಕೃತಿ ಪರಿಚಯ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.


ಸಾಹಿತ್ಯವನ್ನು ಬಿಟ್ಟು ಮಾನವ ಪ್ರಪಂಚ ನೋಡಲು ಸಾಧ್ಯವಿಲ್ಲ. ಮನುಷ್ಯ ಅನಕ್ಷರಸ್ಥರಾಗಿದ್ದ ಕಾಲ ಘಟ್ಟದಲ್ಲೂ ಸಹ ಜನಪದ ಸಾಹಿತ್ಯ ಕಾಣಬಹುದಾಗಿತ್ತು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಪಠ್ಯದೊಂದಿಗೆ ಸಾಮಾನ್ಯ ಜ್ಞಾನ ಹಾಗೂ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಅಲ್ಲದೆ ಸಾಹಿತಿ ಸೋಂಪುರ ಪ್ರಕಾಶ್ ಅವರ ‘ಹಳಿ ತಪ್ಪಿದ ಬದುಕು’ ಪುಸ್ತಕ ಎಲ್ಲರಿಗೂ ಅವಶ್ಯಕವಾಗಿದ್ದು, ಇವರಂತೆ ವಿದ್ಯಾರ್ಥಿಗಳು ಸಹ ತಮ್ಮ ಓದಿನ ಜತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.


ಕೃತಿ ಕುರಿತು ಮಾತನಾಡಿದ ಕಸಾಪ ಮಾಜಿ ಗೌರವ ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ, ‘ಹಳಿ ತಪ್ಪಿದ ಬದುಕು’ ಕೃತಿಯಲ್ಲಿ ಗ್ರಾಮೀಣ ಬದುಕಿನ ನೈಜ ಘಟನೆ, ಐಷಾರಾಮಿ ವ್ಯವಸ್ಥೆಯ ದರ್ಪ, ಯುವ ಜನತೆಯ ಆಸೆಗಳು, ಹರಡುತ್ತಿರುವ ದುಶ್ಚಟಗಳು, ಸಂಬಂಧದಲ್ಲಿ ಬಿರುಕು, ಪಾಲಕರ ಬಗ್ಗೆ ನಿರ್ಲಕ್ಷೃ, ಅನಾಥಾಶ್ರಮಗಳ ಬೆಳೆವಣಿಗೆ, ಕುಗ್ಗುತ್ತಿರುವ ಸಹೋದರತ್ವ, ಭ್ರಷ್ಟಾಚಾರ, ನಿಲ್ಲದ ಅತ್ಯಾಚಾರ, ವ್ಯಭಿಚಾರ, ಅನ್ಯಾಯ ಮತ್ತು ಅಕ್ರಮ ಚಟುವಟಿಕೆ, ಸಾಮಾಜಿಕ ಪಿಡುಗುಗಳು ಹೀಗೆ ಹಲವು ನೈಜ ಘಟನೆಗಳನ್ನು ತಿಳಿಸುವ ಮೂಲಕ ಅದನ್ನು ಪುಸ್ತಕ ರೂಪದಲ್ಲಿ ತಂದು ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಇವರ ಕೃತಿಯ ಬಗ್ಗೆ ಇಲಾಖೆಯಿಂದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ತಾಲೂಕು ಜನಪದ ಪರಿಷತ್ತು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ, ಸಾಹಿತಿ ಸೋಂಪುರ ಪ್ರಕಾಶ್, ವಿದ್ಯಾವಿಕಾಸ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ರಮೇಶ್, ಉಪನ್ಯಾಸಕರಾದ ಸುಜಯ್, ಧನಂಜಯ, ಸುಕನ್ಯಾ, ನಿವೃತ್ತ ಉಪನ್ಯಾಸಕ ಅಶೋಕ್ ಪಾಟೀಲ್ ಇದ್ದರು.