ವಿಜಯಪುರ : ಸದ್ಯದ ದಿನಗಳಲ್ಲಿ ಸಾಹಿತ್ಯದಲ್ಲೂ ಜಾತಿಯ ವಾಸನೆ ಸೂಸುತ್ತಿದೆ. ಇದು ದುರಂತದ ಸಂಗತಿ ಎಂದು ಸಾಹಿತಿ ಸತ್ಯಾನಂದ ಪಾತ್ರೋಟ ವಿಷಾದ ವ್ಯಕ್ತಪಡಿಸಿದರು.
ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಪ್ರೊ. ದೊಡ್ಡಣ್ಣ ಭಜಂತ್ರಿ ಅವರ ಮೂರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತಿ ಜಗತ್ತಿನ ಅನಧಿಕೃತ ಶಾಸಕ ಎಂದರು.
ಹಿರಿಯ ಸಂಶೋಧಕ ಡಾ. ಎಚ್.ಟಿ. ಪೋತೆ ಮಾತನಾಡಿ, ದೊಡ್ಡಣ್ಣ ಭಜಂತ್ರಿ ಅವರು ಅರ ಕಲಿಸಿದ ಗುರುವಿನ ಸಾಹಿತ್ಯ ಕೃತಿಗೆ ಮುನ್ನುಡಿ ಬರೆದು, ಲೋಕಾರ್ಪಣೆಗೊಳಿಸಿದ್ದು ಅಪರೂಪದ ಣವಾಗಿದೆ ಎಂದರು.
ಅಧ್ಯತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳುವಂತೆ ಒಂದು ಪುಸ್ತಕ ಪ್ರಕಟವಾಗಬೇಕಾದರೆ ಒಂದು ಮಗು ಜನಿಸಿದಂತೆ ಎನ್ನುವ ಮಾತು ಸತ್ಯವಾದುದು. ಇಂದು ಭಜಂತ್ರಿಯವರ ಪ್ರಕಟಗೊಂಡ ಮೂರು ಕೃತಿಗಳು ಮುಂದಿನ ಪೀಳಿಗೆಗೆ ದಾರಿಯಾಗಲಿವೆ ಎಂದರು.
ಮೋಹನ ಕಟ್ಟಿಮನಿ, ಡಾ. ವೈ.ಎಂ. ಯಾಕೊಳ್ಳಿ ಮತ್ತು ಡಾ. ರಮೇಶ ತೇಲಿ ಅವರು ಪ್ರೊ. ದೊಡ್ಡಣ್ಣ ಭಜಂತ್ರಿ ಅವರ ಜಾನಪದ ಸಂಭ್ರಮ, ಸೂಜಿ ಮಲ್ಲಿಗೆ ಹಾಗೂ ಸಾಂಗತಾ ಕೃತಿಗಳನ್ನು ಪರಿಚಯಿಸಿದರು.
ಲೇಖಕ ದೊಡ್ಡಣ್ಣ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಧರ ಸಾಲಿ, ಪಿ.ಎಸ್. ಕಡೆಮನಿ, ಅನಿಲ ಹೊಸಮನಿ, ಅಭಿಷೇಕ ಚಕ್ರವರ್ತಿ, ಸುಜಾತ ಚಲವಾದಿ, ಇಂದುಮತಿ ಲಮಾಣಿ, ವಿದ್ಯಾವತಿ ಅಂಕಲಗಿ, ಡಾ. ಎಂ.ಎಸ್. ಮದಭಾವಿ, ಡಾ. ವಿ.ಡಿ. ಐಹೊಳಿ, ಡಾ. ಸಂಗಮೇಶ ಮೆತ್ರಿ, ಜಂಬೂನಾಥ ಕಂಚಾಣಿ, ಶಹನಾಯಿ ವಾದಕ ಗಿರಿಮಲ್ಲಪ್ಪ ಭಜಂತ್ರಿ, ವಿ.ಎಸ್. ಹಿರೇಮಠ, ಶಾರದಾ ಐಹೊಳ್ಳಿ, ಸುಭಾಷ ಕನ್ನೂರ ಮತ್ತಿತರರಿದ್ದರು.