ಮೈಸೂರು ದಸರಾ ಆನೆಗಳಿಗೆ ಅಷ್ಟೇ ಅಲ್ಲ, ಸಾಹಿತ್ಯದ ದೊಡ್ಡ ಆನೆಗಳಿಗೂ ಹೆಸರುವಾಸಿ. ಅವುಗಳೆಲ್ಲ ಒಂದೊಂದು ಹಿಂಡು ಕಟ್ಟಿಕೊಂಡಿವೆ. ಇದರಿಂದ ಧನಾತ್ಮಕ, ಗುಣಾತ್ಮಗಳೆರಡು ಪರಿಣಾಮಗಳಿವೆ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.
ಯಶಸ್ವಿನಿ ಮಹಿಳಾ ಜಾಗೃತಿ ಪರಿಷತ್ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) ಅವರ 85ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೇರು ಎತ್ತರದ ವ್ಯಕ್ತಿತ್ವದ ಸಿಪಿಕೆ ಕೂಡ ಒಂದು ದೊಡ್ಡ ಆನೆ’ ಎಂದರು.
ಹೊಗಳಿಕೆ-ತೆಗಳಿಕೆಗಳೆರಡೂ ಇರಬೇಕು. ಈ ಪೈಕಿ ಹೊಗಳಿಕೆಯಷ್ಟೇ ಇದ್ದರೆ ಅದು ನಿಷ್ಕ್ರಿಯತೆ ಸಂಕೇತ. ತೆಗಳಿಕೆಯಷ್ಟೇ ಇದ್ದರೆ, ಇನ್ನೂ ನಿಷ್ಕ್ರಿಯತೆ ಧ್ಯೂತಕ. ಕಾರಣ ಹೇಳಿ ಟೀಕಿಸುವರರು ನಿಜವಾದ ಗುರು. ಅವರು ಸರಿದಾರಿಗೆ ತರುವವರು. ಈ ಸಾಲಿಗೆ ಸಿಪಿಕೆ ಸಹ ಸೇರುತ್ತಾರೆ. ಅವರದ್ದು ಸಮನ್ವಯ ವಿಮರ್ಶೆ. ಹೀಗೆ ಇದ್ದರೆ ಮಾತ್ರ ಓದುಗರಲ್ಲಿ, ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಸುತ್ತದೆ ಎಂದರು.
ಸಿಪಿಕೆ ಕರ್ನಾಟಕ ಚುಟುಕು ರತ್ನ. ಅವರದ್ದು ಘನಗಾಂಭಿರ್ಯ ವ್ಯಕ್ತಿತ್ವ. ಜತೆಗೆ, ಲಘು ಹಾಸ್ಯಮಯಿ. ಗಾಂಭಿರ್ಯ-ಹಾಸ್ಯಗಳೆರಡೂ ವಿರೋಧಿಮುಖಿ. ಈ ಎರಡು ಗುಣ ಹೊಂದಿರುವ ಸಿಪಿಕೆ ಅಪರೂಪದ ವ್ಯಕ್ತಿತ್ವ. ತಮ್ಮನ್ನು ತಾವೇ ಲೇವಡಿ, ಟೀಕೆ ಮಾಡಿಕೊಳ್ಳುವ ಅವರು ಭಿನ್ನ ಹಾಸ್ಯ ಪ್ರಜೆ ಮೈಗೂಡಿಸಿಕೊಂಡವರು ಎಂದರು.
ಅವರು ವೃದ್ಧ ಜೀವಕವಷ್ಟೇ ಅಲ್ಲ, ಜ್ಞಾನ ಜೀವಕ. ಈ ಎರಡರ ಒಳ ರೂಪಕ ಅವರು. ಬಹುಭಾಷಾ ಪಂಡಿತರಾದ ಇವರು, ಸಮನ್ವಯತೆಯನ್ನು ಸಿದ್ಧಿಸಿಕೊಂಡಿದ್ದಾರೆ. ಪರಂಪರೆ ಮೌಲ್ಯ ಅಂತಃಗತವಾಗಿರುವುದೇ ಜ್ಞಾನ ಜೀವಕ ಎಂದರು.
ಅವರ ಸಾಹಿತ್ಯ ಕೃಷಿಯಲ್ಲಿ ಪ್ರಾಸವೇ ಪ್ರಧಾನ. ಅದುವಿಲ್ಲದೆ ನಿರೂಪಣೆ, ವಿಡಂಬನೆ ಇರಲ್ಲ. ಸೂಕ್ಷ್ಮ ಸಂವೇದನೆಗುಣ ಹೊಂದಿರುವ ಇವರ ಸಾಹಿತ್ಯವನ್ನು ಓದುವುದು ಒಂದು ಪರಂಪರೆಯನ್ನೇ ಓದಿಕೊಂಡಂತಾಗಲಿದೆ ಎಂದರು.
ಚುಟುಕು ಎಂದರೆ ಕ್ಷುಲ್ಲಕ ಕಥೆ. ಅದನ್ನು ಸುಮ್ಮನೆ, ಲೇವಡಿ, ಚುಚ್ಚುಮಾತಿಗೆ ಬರೆಯುತ್ತಾರೆ ಎನ್ನುತ್ತಿದ್ದರು. ಹೀಗಾಗಿ, ಚುಟುಕು ಸಾಹಿತ್ಯವನ್ನು ಗಂಭೀರವಾಗಿ ಪರಿಗಣನೆ ಮಾಡದ ಕಾಲಘಟ್ಟದಲ್ಲೇ ಸಿಪಿಕೆ ಅವರು ಪಿಎಚ್‌ಡಿ ಮಾಡಿದವರು. ಚುಟುಕು ಎಂದರೆ, ಸಮುದ್ರದ ಸತ್ವವನ್ನು ಒಂದು ಗಿಂಡಿಯಲ್ಲಿ ಹಿಡಿದಂತೆ. ಅಂತಹ ಶಕ್ತಿ ಇದಕ್ಕೆ ಇದೆ. ಸಿಪಿಕೆ ಅದನ್ನು ಸಮರ್ಥವಾಗಿ ಬಳಸಿಕೊಂಡರು. ಹೀಗಾಗಿಯೇ ಅವರು ಚುಟುಕು ಕವಿಯಾದರು ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಸಿಪಿಕೆ 300 ಪುಸ್ತಕಗಳ ಸರದಾರರು. ಈ ಕೃತಿಗಳ ಮೂಲಕ ಸಿಪಿಕೆ ಅವರ ತುಲಭಾರ ಮಾಡಿದರೆ, ಪುಸ್ತಕದ ಭಾರವೇ ಅಧಿಕವಾಗಲಿದೆ. ಅವರದ್ದು ಮನಃಪೂರ್ವಕ ಬೆರವಣಿಗೆ. ಗಾತ್ರಕ್ಕಿಂತ ಮೌಲ್ಯವೇ ಹಿರಿದಾಗಿದೆ. ಅವುಗಳೆಲ್ಲ ಮೌಲ್ಯಿಕ ಕೃತಿಗಳಾಗಿವೆ ಎಂದರು
.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಯೋಜನಾ ನಿರ್ದೇಶಕ ಡಾ.ನೀಲಗಿರಿ ತಳವಾರ, ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ.ಎಂಜಿಆರ್ ಅರಸ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೋದ್ಯಮಗಳ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಲಿಂಗರಾಜು, ಅರಸು ಮಂಡಳಿಯ ಅಧ್ಯಕ್ಷ ಎಚ್‌ಎಂಟಿ ಲಿಂಗರಾಜೇ ಅರಸ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಯಶಸ್ವಿನಿ ಮಹಿಳಾ ಜಾಗೃತಿ ಪರಿಷತ್ ಅಧ್ಯಕ್ಷೆ ಮಮತಾ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಎಸ್.ವಿ.ಪವಿತ್ರ ಇದ್ದರು.