ಜಿಲ್ಲೆ

ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ

ಮೈಸೂರು: ಮುಕ್ತಕ ಸಾಹಿತ್ಯದ ಪ್ರತಿಯೊಂದು ಸಾಲು ಆಳವಾದ ಅರ್ಥ ಹಾಗೂ ಗಾಂಭೀರ್ಯತೆಯನ್ನು ಒಳಗೊಂಡಿರುತ್ತದೆ. ಈ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು ಎಂದು ಹಿರಿಯ ಉಪನ್ಯಾಸಕ ಎಸ್. ಸ್ವಾಮಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್, ಹಿಮಾಲಯ ಪ್ರತಿಷ್ಠಾನ, ರೋಟರಿ ಕ್ಲಬ್ ಆಫ್ ಮೈಸೂರ್ ಸ್ಟಾರ್ಸ್ ಸಹಯೋಗದಲ್ಲಿ ವಿಜಯನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಪ್ರಥಮ ಮುಕ್ತಕ ಸಾಹಿತ್ಯೋತ್ಸವದಲ್ಲಿ ಮಾತನಾಡಿದರು.

ಕವಿಗೋಷ್ಠಿಯಲ್ಲಿ ಮುಕ್ತಕ ಕವಿತೆಗಳು ಮುಕ್ತವಾಗಿ ಹೊರಬಂದಿವೆ. ಮೊದಲ ಬಾರಿಗೆ ಈ ರೀತಿಯ ಸಮ್ಮೇಳನವನ್ನು ಆಯೋಜಿಸಿರುವುದು ಮುಕ್ತಕ ಸಾಹಿತ್ಯಕ್ಕೆ ಉತ್ತೇಜನ ನೀಡಿದಂತಾಗಿದೆ ಎಂದರು.

ಪ್ರತಿಯೊಬ್ಬರೂ ತಮ್ಮ ಕೆಲಸ ಕಾರ್ಯದೊಂದಿಗೆ ಸಂಗೀತ, ಸಾಹಿತ್ಯ, ಕಲೆಯ ಕುರಿತು ಅಭಿರುಚಿಯನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿನ ಸರ್ವರ ಹಿತವನ್ನು ಬಯಸುವುದು ಪ್ರದರ್ಶನ ಕಲೆಗಳು ಎಂದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮುಕ್ತಕ ಸಾಹಿತ್ಯದ ರಚನೆ ಸುಲಭದ ಮಾತಲ್ಲ. ಅದರಲ್ಲಿ ಭಾವಾರ್ಥ ಇರಬೇಕು ಎಂದರು.
ಮುಕ್ತಕ ಕವಿಗೋಷ್ಠಿಯಕಲ್ಲಿ ಕವಿತೆ ವಾಚಿಸಿದ 11 ಕವಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಮುಕ್ತಕ ಸಾಹಿತಿ ಎಸ್.ರಾಮಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ‘ಕಮಲ ಪುಷ್ಪಗಳು’ ಮುಕ್ತಕ ಸಂಕಲನ ಮತ್ತು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಹಿರಿಯ ನಾಗರಿಕ ವೇದಿಕೆಯ ಸಂಸ್ಥಾಪಕ ಎಂ.ಪ್ರಭುಸ್ವಾಮಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮುಕ್ತಕ ಸಾಹಿತಿ ಕಮಲಾ ರಾಜೇಶ್, ವೈದ್ಯ ಸಾಹಿತಿ ಡಾ.ಎಸ್.ಪಿ.ಯೋಗಣ್ಣ, ರಂಗಕರ್ಮಿ ರಾಜಶೇಖರ್ ಕದಂಬ, ಸಮಾಜ ಸೇವಕ ಡಾ.ಕೆ.ರಘುರಾಮ್ ವಾಜಪೇಯಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ಹಾಜರಿದ್ದರು.