ಜಿಲ್ಲೆ

ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ

ಗುರುಮಠಕಲ್: ದೇಶದ ಸಾಂಸ್ಕೃತಿಕ ಮತ್ತು ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರವಾಗಿದೆ ಎಂದು ಖಾಸಮಠ ಶಿಕ್ಷಣ ಸಂಸ್ಥೆ ನಿರ್ದೇಶಕ ಹಾಗೂ ನಿವೃತ್ತ ಉಪನ್ಯಾಸಕ ಅಖಂಡೇಶ್ವರಯ್ಯ ಹಿರೇಮಠ ಹೇಳಿದರು.

ಪಟ್ಟಣದ ಖಾಸಮಠದಲ್ಲಿ ಹಮ್ಮಿಕೊಂಡ ಶರಣ ಸಂಗಮ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಕಾಯಕ ಸಂಸ್ಕೃತಿ ಪ್ರತಿನಿಧಿಗಳಾಗಿ ಇಡೀ ನಾಡಿನ ತುಂಬ ಪ್ರಗತಿಪರ ಹೆಜ್ಜೆ ಗುರುತು ಮೂಡಿಸಿದ ಶರಣರ ನಡೆ-ನುಡಿಗಳು ಈ ದೇಶದ ಸಾಂಸ್ಕೃತಿಕ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದರು.

ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರೂ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ನಾಗರಿಕರಾಗಬೇಕು. ಭಕ್ತಿಗಿಂತ ಮಿಗಿಲಾದ ಸಾಧನ ಸಂಪತ್ತು ಮತ್ತೊಂದಿಲ್ಲ. ಭಕ್ತಿಯ ವಿಕಾಸವೇ ಪರಶಿವನ ಸಾಕ್ಷಾತ್ಕಾರ. ಭಕ್ತಿ ಭಾಗ್ಯವೇ ಮುಕ್ತಿ ಭಾಗ್ಯವಾಗಿದೆ ಎಂದು ಹೇಳಿದರು.

ಖಾಸಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ವೇಳೆ ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ್, ಜಿಲ್ಲಾ ವೀರಶೈವ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಚಂಡರಿಕಿ, ಗುರುಮಠಕಲ್ ವೀರಶೈವ ಸಮಾಜದ ಅಧ್ಯಕ್ಷ ನಾಗಭೂಷಣಂ ಅವುಂಟಿ, ರಘುನಾಥರೆಡ್ಡಿ ನಜರಪುರ, ನರಸಿರೆಡ್ಡಿ ಗಡ್ಡೆಸೂಗೂರು, ನರಸಿಮುಲು ಗಂಗನೋಳ ಇತರರಿದ್ದರು.