ಬಸವಕಲ್ಯಾಣ: ಪರಿವರ್ತನೆ ತರುವಂಥ ಶಕ್ತಿ ಹೊಂದಿದ ಸಾಹಿತ್ಯದ ಮೂಲಕ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಕೆಲಸ ಸಾಹಿತಿಗಳಿಂದ ನಡೆಯಬೇಕು ಎಂದು ಲಾತೂರಿನ ಸಾಹಿತಿ ಭಾರತ ಸಾತಪೂತೆ ಹೇಳಿದರು.
ತಳಭೋಗ ಗ್ರಾಮದಲ್ಲಿ ಶಾಂತಾಬಾಯಿ ಸಂಭಾಜಿ ಸಸಾನೆ ಅವರ ೪ನೇ ಪುಣ್ಯಸ್ಮರಣೆ ನಿಮಿತ್ತ ಗುರುವಾರ ಏರ್ಪಡಿಸಿದ್ದ ಮರಾಠಿ ಕವಿ ಸಮ್ಮೇಳನ ಹಾಗೂ ಸಾಹಿತಿ ಸೂರ್ಯಕಾಂತ ಸಸಾನೆ ಸಂಪಾದಿಸಿದ ಬೀದರ್ ಜಿಲ್ಯಾತಿಲ ಮರಾಠಿ ಸಾಹಿತ್ಯಿಕ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆಧ್ಯಕ್ಷತೆ ವಹಿಸಿದ್ದ ಅವರು, ಸಮಾಜದಲ್ಲಿ ಮೂಢನಂಬಿಕೆ, ಅನಿಷ್ಟದ ವಿರುದ್ಧ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಪರಿಣಾಮಕಾರಿಯಾಗಿ ಆಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಬೇಲೂರಿನ ಶರಣ ಉರಿಲಿಂಗ ಪೆದ್ದಿ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಶಿಕ್ಷಣ ಜತೆಗೆ ಮಕ್ಕಳಲ್ಲಿ ಆದರ್ಶ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ. ಸಾಹಿತಿ, ಬುದ್ಧಿಜೀವಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮಕ್ಕಳು ಉತ್ತಮ ಸಂಸ್ಕಾರ ಬೆಳೆಸಿಕೊಂಡು ಗುರು-ಹಿರಿಯರ ಗೌರವಿಸುವದನ್ನು ರೂಢಿಸಿಕೊಳ್ಳಬೇಕು ಎಂದು ಹಿತೋಪದೇಶ ನೀಡಿದರು.
ಮೇಹಕರದ ಕೀರ್ತನಕಾರ ರಮೇಶ ಮಹಾರಾಜ ಮಾತನಾಡಿ, ಶರಣರು-ಸಂತರ ತತ್ವ ಸಂದೇಶಗಳನ್ನು ಅರಿತು ಜೀವನದಲ್ಲಿ ಆಳವಡಿಸಿಕೊಂಡರೆ ನೆಮ್ಮದಿ ಕಾಣಲು ಸಾಧ್ಯ. ಜನರಲ್ಲಿ ಓದುವ ಅಭಿರುಚಿ ಹೆಚ್ಚಿಸುವಲ್ಲಿ ಇಂಥ ಕಾರ್ಯಕ್ರಮಗಳು ಸಹಕಾರಿ ಆಗುತ್ತವೆ ಎಂದರು.
ಶರಣ ಮಾದಾರ ಚನ್ನಯ್ಯ ಅರಿವು ಪೀಠದ ಶ್ರೀ ಕಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಹಿತಿ ಅಮೃತ ಆಕರೆ ಮಾತನಾಡಿದರು. ಸಾಹಿತಿ ಸೂರ್ಯಕಾಂತ ಸಸಾನೆ ಸ್ವಾಗತಿಸಿ ನಿರೂಪಣೆ ಮಾಡಿದರು.
ಮರಾಠಿ ಕವಿ ಸಮ್ಮೇಳನದಲ್ಲಿ ಘಾಟಬೋರಾಳದ ಆನಂದ ಜಾಧವ, ತಾನಾಜಿ ಸಾವರೆ, ಕುರುಬಖೇಳಗಿಯ ರವಿದಾಸ ಕಾಂಬಳೆ, ಚಾಂಡೇಶ್ವರದ ಅಶೋಕ ಪಾಟೀಲ, ಲಂಜವಾಡದ ಶಿವಾಜಿ ಶಿಂಧೆ, ಬಸವಕಲ್ಯಾಣದ ಲಕ್ಷ್ಮೀಬಾಯಿ ಪಾಟೀಲ, ಭಾಲ್ಕಿಯ ದಯಾನಂದ ಮಮದೆ ಕವನ ವಾಚನ ಮಾಡಿದರು.