ಮೂಡಿಗೆರೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯನ್ನು ಅಧಿಕಾರಿಗಳು ಮತ್ತು ಕಸಾಪ ಪದಾಧಿಕಾರಿಗಳು ಸ್ವಾಗತಿಸಿದರು. ಸೂರಿ ಶ್ರೀನಿವಾಸ್, ಡಿ.ಕೆ.ಲಕ್ಷ್ಮಣಗೌಡ, ರಾಜಶೇಖರ್‌ಮೂರ್ತಿ, ಶ್ರೀನಾಥ್ ರೆಡ್ಡಿ, ದೀಪಕ್ ದೊಡ್ಡಯ್ಯ, ಶಾಂತಕುಮಾರ್, ಪರೀಕ್ಷಿತ್ ಜಾವಳಿ ಇತರರಿದ್ದರು. 
ಜಿಲ್ಲೆ

ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಿ

ಮೂಡಿಗೆರೆ: ಮಂಡ್ಯದಲ್ಲಿ ಡಿ.21ರಂದು ಪ್ರಾರಂಭವಾಗುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲ ಕನ್ನಡಿಗರೂ ಭಾಗವಹಿಸಿ ಸಾಹಿತ್ಯ ಸಂಭ್ರಮಕ್ಕೆ ಮೆರುಗು ನೀಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ಲಯನ್ಸ್ ವೃತ್ತದಲ್ಲಿ ಸೋಮವಾರ ಕನ್ನಡ ಜ್ಯೋತಿ ರಥಯಾತ್ರೆ ಸ್ವಾಗತಿಸಿ ಮಾತನಾಡಿ, ಕಸಾಪ ಸಮ್ಮೇಳನ ನಡೆಸುವ ಸಲುವಾಗಿ ಮಾತ್ರ ಇರುವ ಸಂಘಟನೆಯಲ್ಲ. ಗ್ರಾಮೀಣ ಭಾಗದಲ್ಲಿ ಎಲೆಮರೆಕಾಯಿಯಂತಿರುವ ಕನ್ನಡದ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಟ್ಟು ಸಾಹಿತ್ಯ ಬೆಳೆಸಲು ಕಸಾಪ ಮುಂದಾಗಿದೆ. ಕನ್ನಡ ಬೆಳೆಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ನವೆಂಬರ್‌ನಲ್ಲಿ ಮಾತ್ರ ಕನ್ನಡ ಕಟ್ಟುವ ಕೆಲಸ ಮತ್ತು ಕನ್ನಡದ ಗುಣಗಾನ ಮಾಡುವುದು ಸರಿಯಲ್ಲ. ವರ್ಷವಿಡೀ ಕನ್ನಡಕ್ಕಾಗಿ ದುಡಿಯಬೇಕು. ಕನ್ನಡದ ವಿರುದ್ಧ ಧ್ವನಿ ಎತ್ತುವವರಿಗೆ ಈ ಭಾಷೆಯ ಬಗೆಗಿನ ಆತ್ಮಗೌರವ ತಿಳಿಹೇಳಿ ಅವರನ್ನು ಕನ್ನಡದತ್ತ ಕರೆತರುವ ಕೆಲಸ ಪ್ರತಿ ಕನ್ನಡಿಗರಿಂದ ಆಗಬೇಕಾಗಿದೆ ಎಂದು ತಿಳಿಸಿದರು.

ಕಸಪ ತಾಲೂಕು ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಮಾತನಾಡಿ, ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥಯಾತ್ರೆ ಎಲ್ಲ ತಾಲೂಕಿನಲ್ಲಿ ಸಂಚರಿಸಲಿದೆ. ಸಾಹಿತ್ಯಾಸಕ್ತರು ಮತ್ತು ಭಾಷಾಭಿಮಾನಿಗಳು ರಥಯಾತ್ರೆಯನ್ನು ಸ್ವಾಗತಿಸುವ ಮೂಲಕ ಕನ್ನಡ ಬೆಳೆಸುವ ಪ್ರಯತ್ನವಾಗಬೇಕು ಎಂದು ಹೇಳಿದರು.

ಕನ್ನಡ ಜ್ಯೋತಿ ರಥಯಾತ್ರೆಯೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ತಹಸೀಲ್ದಾರ್ ರಾಜಶೇಖರಮೂರ್ತಿ, ಪಿಎಸ್‌ಐ ಶ್ರೀನಾಥ್ ರೆಡ್ಡಿ, ಕಸಾಪ ಪದಾಧಿಕಾರಿಗಳಾದ ದೀಪಕ್ ದೊಡ್ಡಯ್ಯ, ಪರೀಕ್ಷಿತ್ ಜಾವಳಿ, ಅನಿತಾ ಜಗದೀಪ್, ಬಣಕಲ್ ಹೋಬಳಿ ಕಸಾಪ ಅಧ್ಯಕ್ಷ ಬಿ.ಕೆ.ಲೋಕೇಶ್, ಕರವೇ ತಾಲೂಕು ಅಧ್ಯಕ್ಷ ವಿನೋದ್‌ಕುಮಾರ್, ಬಕ್ಕಿ ಮಂಜು, ಶಾಂತಕುಮಾರ್, ಹಸೈನಾರ್, ಎಂ.ಎಸ್.ನಾಗರಾಜ್, ಬಕ್ಕಿ ರವೀಂದ್ರ, ಕುನ್ನಳ್ಳಿ ರವಿ, ಹರೀಶ್ ಇತರರಿದ್ದರು.