ಔರಾದ್: ಪಟ್ಟಣದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ 13ರಂದು ಆಯೋಜಿಸಿದ 6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕ ಸಕಲ ಸಿದ್ಧತೆ ಮಾಡಿಕೊಂಡಿವೆ.
ಸಾಹಿತಿ ಸಂಜುಕುಮಾರ ಜುಮ್ಮಾ ಸರ್ವಾಧ್ಯಕ್ಷತೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅಧ್ಯಕ್ಷತೆಯಲ್ಲಿ ಸಮ್ಮೇಳನದಲ್ಲಿ ದಿನವಿಡಿ ವಿವಿಧ ಕಾರ್ಯಕ್ರಮ ನಡೆಯಲಿವೆ. ಹಿರಿಯ ಸಾಹಿತಿ ಬಸವಣ್ಣಪ್ಪ ಅಲ್ಮಾಜೆ ಹೆಸರಿನ ವೇದಿಕೆ, ಪ್ರಭುಶೆಟ್ಟಿ ಸೈನಿಕಾರ್ ಹೆಸರಿನಲ್ಲಿ ಮಂಟಪ ಹಾಗೂ ವೈಜಿನಾಥ ಪಟ್ನೆ, ಮನ್ಮಥಪ್ಪ ಶೆಟಕಾರ ಮಹಾದ್ವಾರ ನಿರ್ಮಿಸಲಾಗಿದೆ.
ಬೆಳಗ್ಗೆ 8.30ಕ್ಕೆ ಅಮರೇಶ್ವರ ದೇವಸ್ಥಾನದಿಂದ ನಾಗಮಾರಪಳ್ಳಿ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಯಲಿದೆ. 11ಕ್ಕೆ ಗದಗನ ಸಾಹಿತಿ ಪ್ರೊ. ಸಿದ್ದು ಯಾಪಲಪರವಿ ಸಮ್ಮೇಳನಕ್ಕೆ ಚಾಲನೆ ನೀಡುವರು. ಮಧ್ಯಾಹ್ನ 2ಕ್ಕೆ ಸಂಕಿರಣ ಗೋಷ್ಠಿ ನಡೆಯಲಿದೆ. ವಿಠಲರಾವ ಯೋಗಿ, ಡಾ. ರಾಜೇಂದ್ರ ಯರನಾಳೆ, ಶಿವಲಿಂಗ ಹೇಡೆ, ಸೂರ್ಯಕಾಂತ ಸಿಂಗೆ, ಚಂದ್ರಕಾಂತ ನಿರ್ಮಳೆ ಪಾಲ್ಗೊಳ್ಳುವರು. 4.30ಕ್ಕೆ ನಡೆಯುವ ಕವಿಗೋಷ್ಠಿಯಲ್ಲಿ ಶರಣಪ್ಪ ಬಿರಾದಾರ, ಡಾ.ಮನ್ಮಥ ಡೋಳೆ, ಶಿವಕುಮಾರ ಘಾಟೆ, ಶಿವಕುಮಾರ ಉಪ್ಪೆ, ಹಾವಗಿರಾವ ಇತರರು ಭಾಗವಹಿಸುವರು. ಸಂಜೆ 5.45ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ. 6ಕ್ಕೆ ಸಮಾರೋಪ ಹಾಗೂ ಸನ್ಮಾನವಿದೆ.
ಕುಂಕುಮ ಹಚ್ಚಿ ಆಹ್ವಾನ
ಸಮ್ಮೇಳನ ನಿಮಿತ್ತ ಮಹಿಳಾ ಘಟಕದ ಪದಾಧಿಕಾರಿಗಳು ಮನೆ-ಮನೆಗೆ ತೆರಳಿ ಮಹಿಳೆಯರಿಗೆ ಕುಂಕುಮ ಹಚ್ಚಿ ಸಮ್ಮೇಳನಕ್ಕೆ ಆಹ್ವಾನ ನೀಡುತ್ತಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಆಹ್ವಾನ ನೀಡುತ್ತಿರುವ ಮಹಿಳೆಯರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಗಡಿ ಭಾಗದಲ್ಲಿ ಕನ್ನಡಮಯ ವಾತಾವರಣ ನಿರ್ಮಾಣವಾಗಲು ಎಲ್ಲ ಕನ್ನಡಿಗರೂ ಒಂದಾಗಿ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಶಿಕ್ಷಕಿ ಶೋಭಾ ಡೋಣಗಾಪೂರೆ.
ಸದಸ್ಯರ ಮನೆಗೆ ಅಂಚೆ ಚೀಟಿ
ಸಮ್ಮೇಳನ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ನ 1900 ಅಜೀವ ಸದಸ್ಯರ ಮನೆಗಳಿಗೆ ಅಂಚೆ ಚೀಟಿ ಕಳಿಸಿ ಸಹ ಆಹ್ವಾನವನ್ನು ನೀಡಲಾಗುತ್ತಿದೆ. ಈಗಾಗಲೇ ಔರಾದ್ ಮತ್ತು ಕಮಲನಗರ ತಾಲೂಕಿನ ಸರ್ವ ಸದಸ್ಯರ ಮನೆಗಳಿಗೆ ಅಂಚೆ ಚೀಟಿ ರವಾನಿಸಿ ಆಹ್ವಾನ ನೀಡಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ ತಿಳಿಸಿದ್ದಾರೆ.
ತಾಲೂಕು ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೆರವಣಿಗೆ, ಉದ್ಘಾಟನೆ ಸೇರಿ ವಿವಿಧ ಗೋಷ್ಠಿ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಸಕ್ತರು, ಸಾಹಿತಿಗಳು ಆಗಮಿಸಬೇಕು. ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯುವಂತೆ ಎಲ್ಲರೂ ಸಹಕರಿಸಬೇಕು.| ಸುರೇಶ ಚನ್ನಶೆಟ್ಟಿಕಸಾಪ ಜಿಲ್ಲಾಧ್ಯಕ್ಷ