ಬೀದರ್‌ನಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಕರ್ನಾಟಕ ದ್ವಿತೀಯ ಗಜಲ್ ಸಮ್ಮೇಳನ ಉದ್ಘಾಟನೆಯಲ್ಲಿ ಸರ್ವಾಧ್ಯಕ್ಷ ಪ್ರೊ.ಕಾಶೀನಾಥ ಅಂಬಲಗೆ, ಮಹ್ಮದ್ ಬಡ್ಡೂರು, ರಂಗಸ್ವಾಮಿ ಸಿದ್ದಯ್ಯ, ಮಹಿಪಾಲರಡ್ಡಿ ಮುನ್ನೂರ, ಸುರೇಶ ಚನ್ನಶೆಟ್ಟಿ, ಪ್ರಭಾವತಿ ದೇಸಾಯಿ, ಸುರೇಶ ಚನ್ನಶೆಟ್ಟಿ, ಡಾ.ಸಂಜೀವಕುಮಾರ ಅತಿವಾಳೆ ಇತರರಿದ್ದರು. 
ಜಿಲ್ಲೆ

ಸಾಹಿತ್ಯ ಸಮಾಜಮುಖಿಯಾಗಿರಲಿ

ಬೀದರ್: ಸಾಹಿತಿಗಳು ರಚಿಸುವ ಸಾಹಿತ್ಯ ಸಮಾಜಮುಖಿ ಚಿಂತನೆಗಳನ್ನು ಪ್ರತಿಪಾದಿಸಬೇಕು. ಅಂದಾಗಲೇ ಜನಮಾನಸದಲ್ಲಿ ಉಳಿಯಲು ಸಾಧ್ಯ ಎಂದು ಅಖಿಲ ಕರ್ನಾಟಕ ದ್ವಿತೀಯ ಗಜಲ್ ಸಮ್ಮೇಳನಾಧ್ಯಕ್ಷ ಡಾ.ಕಾಶೀನಾಥ ಅಂಬಲಗೆ ಹೇಳಿದರು.

ಗಜಲ್ ಅಕಾಡೆಮಿ ಹಾಗೂ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಡಿ ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಕರ್ನಾಟಕ ದ್ವಿತೀಯ ಗಜಲ್ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೀಯ ಭಾಷಣ ಮಾಡಿದ ಅವರು, ಸಾಹಿತಿಗಳಲ್ಲಿ ತಾಳ್ಮೆ ಅಗತ್ಯ. ಎಲ್ಲ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಕಿವಿಮಾತು ಹೇಳಿದರು.

ಇಂದಿನ ದಿನಗಳಲ್ಲಿ ಗೆಳೆಯರ ಸಮಾವೇಶ, ಸಮಾನ ಮನಸ್ಕರ ಸಮ್ಮೇಳನ, ಚಿಂತನ-ಮಂಥನದಂಥ ಕಾರ್ಯಕ್ರಮ ಮೂಲಕ ಒಂದಾಗಲು ಬರಗಾಲ ಇದ್ದಂತಿದೆ. ಗಜಲ್ ಸಮ್ಮೇಳನ ನೆಪದಲ್ಲಿ ನಾವೆಲ್ಲರೂ ಒಂದೆಡೆ ಸೇರಿರುವುದು ಸಕಾರಾತ್ಕಕ ನಡೆ ಎಂದರು.

ಆಧುನಿಕ ಕಾಲದಲ್ಲಿ ಜನಪರ, ಜೀವಪರ ಭಾವನೆಗಳು ಮಾಯವಾಗಿ ಮನುಷ್ಯತ್ವದ ವಿರುದ್ಧವೇ ಒಳಸಂಚು ನಡೆಯುತ್ತಿದೆಯೇ ಎಂದು ಅನಿಸುತ್ತಿದೆ. ಸುಳ್ಳಿನ ಭ್ರಮೆಗಳ ಸಮೃದ್ಧ ಬೆಳೆ ಬೆಳೆಯಲಾಗುತ್ತಿದೆ. ಬೆವರು ಸುರಿಸದವರು ಬೆವರಿನ ಫಲ ತಮ್ಮದಾಗಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಗಜಲ್ ಮೂಲಕ ದಯೆ, ಕರುಣೆ, ಕ್ಷಮೆ ಹಾಗೂ ಸಹೃದಯಿಗಳಾಗಿ ಬುದ್ಧ, ಬಸವ, ಅಂಬೇಡ್ಕರ್, ಕಬೀರ ಅವರಂಥ ಸಂತರ ದಾರಿಯಲ್ಲಿ ನಡೆಯಲು ಪ್ರಯತ್ನಿಸೋಣ. ಕನ್ನಡ ಕಾವ್ಯದಲ್ಲಿ ಇದೀಗ ಗಜಲ್ ಬಿರುಗಾಳಿ ಎದ್ದಿದೆ. ಕನ್ನಡದ ಸಾಕಷ್ಟು ಯುವ ಸಾಹಿತಿಗಳು ಗಜಲ್ ಬರೆಯುತ್ತಿದ್ದಾರೆ. ಗಜಲ್ ಪಿಸುಮಾತಿನ ಕಾವ್ಯ. ದನಿ ತುಸು ದೊಡ್ಡದಾದರೂ ಅದಕ್ಕೆ ಆತಂಕವಾಗುತ್ತದೆ. ಅರ್ಥವಾಗುವಂತೆ ಚಿಕ್ಕ ಮತ್ತು ಚೊಕ್ಕದಾಗಿ ಗಜಲ್ ರಚಿಸಬೇಕು ಎಂದು ಸಲಹೆ ನೀಡಿದರು.

ಛಂದಸ್ಸಿನ ಬಂಧವೊಂದು ದೊರಕಿದರೆ ಸಲೀಸೆಂದು ಭಾವಿಸಿ ಗಜಲ್ ರಚಿಸಲು ಪ್ರಯತ್ನಿಸುವ ಅನೇಕ ಕವಿಗಳು ನಮ್ಮ ನಡುವೆ ಇದ್ದಾರೆ. ಆದರೆ ಗಜಲ್ ಕೇವಲ ನುಡಿಮಾತಲ್ಲ. ಅದೊಂದು ಜೀವನ ಕ್ರಮ. ಕೇವಲ ಛಂದಸ್ಸಲ್ಲ, ವಿಶ್ವ ಮಾನವ ಪ್ರಜ್ಞೆ. ಹೀಗಾಗಿ ಅದಕ್ಕೆ ದೇಶ-ದೇಶಗಳ ಗಡಿ ದಾಟಲು ಸಾಧ್ಯವಾಗಿದೆ. ಬರೀ ದೇಸಿ ಭಾಷೆಗಳಷ್ಟೇ ಅಲ್ಲ. ಧರ್ಮ, ಜಾತಿ, ಪಂಥ, ಪರಂಪರೆ ಹಾಗೂ ಅನೇಕ ಪ್ರಶ್ನಾತೀತ ಪ್ರಮಾಣಗಳನ್ನು ದಾಟಿ ಮುಂದೆ ಹೋಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಂಗಳೂರಿನ ಹಿರಿಯ ಗಜಲ್ ಸಾಹಿತಿ ಮಹ್ಮದ್ ಬಡ್ಡೂರು ಉದ್ಘಾಟಿಸಿದರು. ಕರ್ನಾಟಕ ಗಜಲ್ ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಪ್ರಭಾವತಿ ಎಸ್.ದೇಸಾಯಿ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶಟ್ಟಿ, ಅಕಾಡೆಮಿ ಕಾರ್ಯದರ್ಶಿ ಮಹಿಪಾಲರಡ್ಡಿ ಮುನ್ನೂರ, ಸಮ್ಮೇಳನ ಸಂಚಾಲಕ ಅಬ್ದುಲ್ ಹೈ ತೋರಣಗಲ್, ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಡಾ.ಸಂಜೀವಕುಮಾರ ಅತಿವಾಳೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ್ ಚಿದ್ರಿ, ಸುನಿತಾ ಕೂಡ್ಲಿಕರ್, ಶಂಭುಲಿಂಗ ವಾಲ್ದೊಡ್ಡಿ, ಉಮಾಕಾಂತ ಮೀಸೆ, ವಿಜಯಕುಮಾರ ಗೌರೆ ಇತರರಿದ್ದರು.

ಗಜಲ್ ಕೆಡುಕರದ್ದಲ್ಲ: ಸಾಹಿತ್ಯದಲ್ಲಿ ಯಾರೂ ಕೆಡುಕರಲ್ಲ, ಗಜಲ್ ಎಂಬುದು ಕೆಡುಕರ ಸಾಹಿತ್ಯವಲ್ಲ ಎಂದು ಮಂಗಳೂರಿನ ಹಿರಿಯ ಗಜಲ್ ಸಾಹಿತಿ ಮಹ್ಮದ್ ಬಡ್ಡೂರು ಹೇಳಿದರು. ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಒಂದು ಹೆಣ್ಣಿನ ಅಂದ-ಚೆಂದ ಬರೆಯುವುದಕ್ಕಿಂತ ಉತ್ತಮ ವಿಷಯವನ್ನು ಅರಿತು ಗಜಲ್ ರಚಿಸಬೇಕು ಎಂದು ಸಲಹೆ ನೀಡಿದರು. ನಾನು ಐದು ದಶಕದಿಂದ ಗಜಲ್ ಬರೆಯುತಿದ್ದೇನೆ. ಆದರೆ ಈವರೆಗೆ ಕೇವಲ ೩೦ ಮಾತ್ರ ಬರೆದಿರುವೆ. ಕೆಲ ವರ್ಷಗಳಲ್ಲಿ ನೂರಾರು ಗಜಲ್ ಬರೆಯುವವರು ಸಹ ಇದೀಗ ಬಂದಿದ್ದಾರೆ. ಗಜಲ್ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಾಗಿದೆ. ಏಳೆಂಟು ಸಾಲಿನಲ್ಲಿ ಮಾತ್ರ ಗಜಲ್ ಬರೆದರೆ ಅದಕ್ಕೆ ಅರ್ಥ ಬರುತ್ತದೆ ಎಂದರು.

೧೧ ಗಜಲ್ ಕೃತಿಗಳ ಲೋಕಾರ್ಪಣೆ: ಸಮ್ಮೇಳನ ನಿಮಿತ್ತ ೧೧ ಗಜಲ್ ಕೃತಿಗಳ ಲೋಕಾರ್ಪಣೆ ಮಾಡಲಾಯಿತು. ಗಜಲ್ ನಿನಾದ- ಎ.ಕಮಲಾಕರ, ಕಿಚ್ಚಿಲ್ಲದ ಆವಿಗೆ- ಪ್ರಭಾವತಿ ದೇಸಾಯಿ ವಿಜಯಪುರ, ಗಜಲ್ ಧಾರೆ (ಸಂಪಾದನೆ)- ಡಾ.ಸಿದ್ದರಾಮ ಹೊನ್ಕಲ್ ಶಹಾಪುರ, ಹಾಳು ಗೋಡೆಯಲೊಂದು ಚಿಗುರು- ಜ್ಯೋತಿ ಮಾಳಿ ಬೆಳಗಾವಿ, ಕನ್ನಡಿಯೊಳಗಿನ ಪ್ರತಿಬಿಂಬ- ವಿಜಯಕುಮಾರ ಗೌರೆ ಬೀದರ್, ನೆಲಕ್ಕೆ ನೇಸರದೆ ಧ್ಯಾನ- ಪ್ರೊ.ವೈ.ಎಂ. ಯಾಕೊಳ್ಳಿ ಸವದತ್ತಿ, ಮೌನ ವೀಣೆ ನುಡಿದಾಗ- ಡಾ.ಅನ್ನಪೂರ್ಣ ಹಿರೇಮಠ ಬೆಳಗಾವಿ, ಕುವಲಯ: ನೂರೆಂಟು ಗಜಲ್‌ಗಳು- ಡಾ.ಸುರೇಶ ನೆಗಳಗುಳಿ ದಕ್ಷಿಣ ಕನ್ನಡ, ದಿಲ್‌ಕಶ್- ಡಾ.ರೇಣುಕಾತಾಯಿ ಸಂತಬಾ ರೇಮಾಜಿ ಹುಬ್ಬಳ್ಳಿ, ಹೇಗೆ ಬಿಡಿಸಿಕೊಳ್ಳಲಿ- ಆನಂದ ಭೋವಿ ಸವದತ್ತಿ, ಕಾಡಿದ ಕಂಗಳು- ಅರುಣ್ ಕೂಡ್ಲಿಗಿ ರಚಿತ ಗಜಲ್ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಜಗತ್ತಿನ ಎಲ್ಲ ಕಾವ್ಯ ಪ್ರಕಾರಗಳಲ್ಲಿ ಗಜಲ್ ಅತ್ಯಂತ ಮುಕ್ತ ಮನಸ್ಸಿನ ಮತ್ತು ಮುಕ್ತ ವ್ಯಕ್ತಿತ್ವದ ಕಾವ್ಯವಾಗಿದೆ. ಗಜಲ್ ಬರೆಯುವ, ಓದುವ ಮತ್ತು ಕೇಳುವ ಸಮಾಜಕ್ಕೆ ಒಂದು ಕಾವ್ಯದಂತೆ ರಿವಾಜು ಕಲಿಸಿಕೊಟ್ಟಿದೆ. ಇದನ್ನು ನಾವು ಸಹಜವಾಗಿ ಕಾವ್ಯ ಸಂಸ್ಕೃತಿ ಎಂದು ಹೇಳಬಹುದು.

| ಪ್ರೊ.ಕಾಶೀನಾಥ ಅಂಬಲಗೆ ಅಖಿಲ ಕರ್ನಾಟಕ ದ್ವಿತೀಯ ಗಜಲ್ ಸಮ್ಮೇಳನದ ಅಧ್ಯಕ್ಷ

ಗಜಲ್ ರಚನೆಕಾರರು, ಗಾಯಕರು ಒಂದೆಡೆ ಸೇರಬೇಕೆಂಬ ಉದ್ದೇಶದಿಂದ ಈ ಸಮ್ಮೇಳನ ಆಯೋಜಿಸಲಾಗಿದೆ. ಕನ್ನಡ ಗಜಲ್ ಎಲ್ಲೆಡೆ ಬೆಳೆಸುವ ಕಾರ್ಯ ಆಗಲಿ. ಅಕಾಡೆಮಿ ಯಾರನ್ನೂ ಕಡೆಗಣಿಸಲ್ಲ. ಎಲ್ಲರನ್ನು ತೆಗೆದುಕೊಂಡು ಕ್ರಿಯಾಶೀಲವಾಗಿ ಕೆಲಸ ಮಾಡಲಿದೆ.

| ರಂಗಸ್ವಾಮಿ ಸಿದ್ದಯ್ಯ ಗಜಲ್ ಅಕಾಡೆಮಿ ಅಧ್ಯಕ್ಷ