ಜಿಲ್ಲೆ

ಸಾಹಿತ್ಯ-ಸಂಸ್ಕೃತಿಗಾಗಿ ಕನ್ನಡ ಮಾಧ್ಯಮ ಶಾಲೆ ಉಳಿಯಲಿ

ದೇವದುರ್ಗ: ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಉತ್ತಮ ಕರ್ನಾಟಕ ಮುಂಚೂಣಿಯಲ್ಲಿದೆ. ಉತ್ತರ ಕರ್ನಾಟಕ ಜಾನಪದ ಕಲೆಯ ತಾಯಿಬೇರು ಇದ್ದಂತೆ ಎಂದು ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ ಬಿ.ಮಂಜಮ್ಮ ಜೋಗತಿ ಹೇಳಿದರು.

ಪಟ್ಟಣದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನಿಂದ ಆಯೋಜಿಸಿದ್ದ ಎರಡನೇ ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಜಾನಪದ ಕಲೆಗೆ ಭೇದವಿಲ್ಲ. ಸ್ತ್ರೀಯರು, ಪುರುಷರು ಹಾಗೂ ಜೋಗತಿಯರಿಗೂ ವೇದಿಕೆ ನೀಡಿದೆ. ಜಾನಪದ ಪರಿಷತ್ತು ಸ್ಥಾಪಿಸಿದ ಎಚ್.ಎಲ್.ನಾಗೇಗೌಡ ಅವರು ಗ್ರಾಮೀಣ ಭಾಗದ ಕಲಾವಿದರನ್ನು ಬೆಳೆಸಿದ್ದಾರೆ. ಹಳೇಕಾಲದಲ್ಲಿ ಗ್ರಾಮೀಣ ಭಾಗದ ಜಾನಪದ ಕಲಾವಿದರನ್ನು ಒಗ್ಗೂಡಿಸಿ ಪರಿಷತ್ ಕಟ್ಟಿದ್ದಾರೆ. ಅವರ ಪರಿಶ್ರಮದ ಫಲವಾಗಿ ಜಾನಪದ ಉತ್ತುಂಗದಲ್ಲಿದೆ ಎಂದರು.

ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಬೇಕಿದ್ದರೆ ಕನ್ನಡ ಶಾಲೆಗಳನ್ನು ಉಳಿಸಬೇಕಿದೆ. ಹೀಗಾಗಿ ಪ್ರತಿಯೊಬ್ಬರೂ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ದಾಖಲಿಸಬೇಕು. ಇಂಗ್ಲಿಷ್ ಅಂಕ ಗಳಿಸುವ ಶಿಕ್ಷಣ ಕೊಟ್ಟರೆ, ಕನ್ನಡ ಸಂಸ್ಕಾರ ಕಲಿಸುತ್ತದೆ. ಕುಟ್ಟುವ ಕಲ್ಲು, ಬೀಸುವ ಕಲ್ಲು, ದೊಡ್ಡಾಟ, ಹಲಗು, ಡೊಳ್ಳು ಸಂಸ್ಕೃತಿ ಉಳಿದಿರುವುದು ಕನ್ನಡ ಭಾಷೆಯಿಂದ ಎನ್ನುವುದು ಮರೆಯಬಾರದು. ವ್ಯವಹಾರಕ್ಕಾಗಿ ಇಂಗ್ಲಿಷ್ ಕಲಿಯೋಣ, ಜೀವನ ಹಾಗೂ ಬದುಕಿಗೆ ಕನ್ನಡ ಬೆಳೆಸೋಣ ಎಂದು ತಿಳಿಸಿದರು.

ಪುರುಷರ ಸಾಧನೆ ಹಿಂದೆ ತಾಯಿ, ಪತ್ನಿ ಇದ್ದಾರೆ. ಈಗ ಹೆಣ್ಣಿನ ಸಾಧನೆಗೆ ಪುರುಷರು ಬೆನ್ನೆಲುಬು ಆಗಿ ನಿಲ್ಲುವಂಥ ಸಮಯ ಬಂದಿದೆ. ಹಳ್ಳಿಗಳಿಂದಲೇ ಜಾನಪದ ಉಳಿದಿದ್ದು ತಾಯಿಗೆ ಕೊಟ್ಟಷ್ಟೇ ಸ್ಥಾನಮಾನ ಕನ್ನಡ ಭಾಷೆಗೂ ಕೊಡಬೇಕು. ಹಿಂದಿನ ಕಾಲದಲ್ಲಿ ಹೆಣ್ಣಿಗೆ ಮಾತನಾಡುವ ಧೈರ್ಯ ಇರಲಿಲ್ಲ. ಗಂಡ, ಮಕ್ಕಳ ಮೇಲಿನ ಪ್ರೀತಿ, ಸಿಟ್ಟು, ವ್ಯಾಮೋಹವನ್ನು ರಾಗಿ, ಅಕ್ಕಿ, ಜೋಳ ಕುಟ್ಟುವಾಗ, ಬೀಸುವಾಗ ಪದಕಟ್ಟಿ ಹಾಡಿ ನೋವು, ತಲಿವು, ಸುಖ ದುಃಖ ತೋಡಿಕೊಳ್ಳುತ್ತಿದ್ದರು. ಹೀಗೆಯೇ ಜಾನಪದ ಬೆಳೆದಿದೆ ಎಂದರು.

ಮನೆಯಿಂದ ನಾನು ಹೊರಬಿದ್ದಾಗ ಜೋಗತಿ ಕಲೆ ನಂಬಿಬದುಕು ಕಟ್ಟಿಕೊಂಡೆ. ಜೋಗತಿಯನ್ನು ಕೈಯಲ್ಲಿ ಹಿಡಿದು ಹಾಡುಹೇಳಿ ನೀಡುವ ಹಣವನ್ನು ಬಾಯಿಯಿಂದೆ ಎತ್ತಿಕೊಳ್ಳುತ್ತಿದ್ದೆ. ಎಚ್.ಎಲ್.ನಾಗೇಗೌಡರು ಜಾನಪದ ಸಮ್ಮೇಳನಕ್ಕೆ ನನಗೆ ಆಹ್ವಾನ ನೀಡಿದಾಗ ನನ್ನ ಬಳಿ ಒಂದು ಉತ್ತಮ ಸೀರೆ ಇರಲಿಲ್ಲ. ಬೇರೆಯವರ ಸೀರೆ ಉಟ್ಟು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನಾನು ಹಲವು ಅಪಮಾನ ಅನುಭವಿಸಿದೆ. ಇದೀಗ ನನ್ನಿಂದ ಜೋಗತಿಯರಿಗೆ ಬದುಕುವ ಆತ್ಮವಿಶ್ವಾಸ ಬಂದಿದೆ. ಸರ್ಕಾರ ನಮಗೆ ಶೇ.1ಮೀಸಲಾತಿ ಕೊಟ್ಟಿರುವುದರಿಂದ ಬದುಕುವ ಧೈರ್ಯ ಬಂದಿದೆ. ಮಾನ್ವಿಯಲ್ಲಿ ಶಿಕ್ಷಕಿ, ಸಿಂಧನೂರಿನಲ್ಲಿ ಒಬ್ಬರು ಪೊಲೀಸ್ ಆಗಿ ಜೋಗತಿಯರಿಗೆ ಪ್ರೇರಣೆಯಾಗಿದ್ದಾರೆ ಎಂದು ಮಂಜಮ್ಮ ಜೋಗತಿ ಹೇಳಿದರು.

ಕಜಾಪ ಜಿಲ್ಲಾಧ್ಯಕ್ಷ ಡಾ.ಶರಣಪ್ಪ ಆನೆಹೊಸೂರು ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ.ಅರುಣಾ ಹಿರೇಮಠ, ತಾಲೂಕಾಧ್ಯಕ್ಷ ಬಸವರಾಜ ಯಾಟಗಲ್, ಜಾನಪದ ದಿಗ್ಗಜ ಪ್ರಶಸ್ತಿ ಪುರಸ್ಕೃತೆ ಸವಿತಕ್ಕ, ಪತ್ರಕರ್ತ ಚಂದ್ರಕಾಂತ ಮಾಸಾನಿ, ರೇಖಾ ಕೇಶವರೆಡ್ಡಿ, ಮೈನುದ್ದೀನ್ ಕಾಟಮಳ್ಳಿ, ಶಿಖರೇಶ ಪಾಟೀಲ್, ಅಶೋಕಗೌಡ ಪಾಟೀಲ್, ಲಕ್ಷ್ಮೀದೇವಿ ನಡುವಿನಮನೆ, ಡಾ.ಸುಮಂಗಲಾ ಪತ್ತಾರ ಇತರರಿದ್ದರು.