ಬೀದರ್: ಸಾಹಿತ್ಯ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಮಾಣಿಕನಗರದ ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಶ್ರೀ ಡಾ.ಜ್ಞಾನರಾಜ ಮಾಣಿಕಪ್ರಭು ಹೇಳಿದರು.
ಸಿಕಿಂದ್ರಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಂ.ಜಿ. ಗಂಗನಪಳ್ಳಿ ರಚಿತ ಸ್ಮೃತಿಗಂಧ ಹಾಗೂ ಮಾಣಿಕಪ್ರಭುಗಳ ಕತೆ ಕೇಳೋಣ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿ, ಸಂಗೀತ ಮೊದಲೋ, ಸಾಹಿತ್ಯ ಮೊದಲೋ ಎಂಬುದನ್ನು ನೋಡಿದರೆ ಎರಡೂ ಒಂದಕ್ಕೊಂದು ಪೂರಕ ಎನಿಸುತ್ತದೆ. ಹಲವಾರು ರೋಗಗಳನ್ನು ನಿಯಂತ್ರಣ ಮಾಡುವ ಶಕ್ತಿ ಸಂಗೀತಕ್ಕಿದೆ. ಎಲ್ಲಿ ಸಾಹಿತ್ಯವಿದೆಯೋ ಅಲ್ಲಿ ಸಂಗೀತವಿದೆ ಎಂದರು.
ಉತ್ತಮ ಸಾಹಿತ್ಯ ಜತೆಗೆ ಸಂಗೀತವೆಂಬ ಜೇನು ಬೆರೆಸಿದಾಗ ಆಹ್ಲಾದಿಸುವ ನಮ್ಮ ಮೈಮನಸ್ಸು ಹೂವಿನ ಮಕರಂದ ಹೀರುವ ದುಂಬಿಯಂತಾಗಿ ಮನಸ್ಸು ಗಾಳಿಯಲ್ಲಿ ತೇಲಾಡುತ್ತದೆ. ಸಂಗೀತ ತನ್ನದೇ ಆದ ಗುರುತ್ವಾಕರ್ಷಣ ಶಕ್ತಿ ಹೊಂದಿದೆ. ಎಂಥ ಕಠೋರ ಮನಸ್ಸಿನವರನ್ನೂ ತಲೆದೂಗುವಂತೆ ಮಾಡುತ್ತದೆ. ಸಂಗೀತದ ಶಕ್ತಿಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅವಶ್ಯಕ ಎಂದು ಹೇಳಿದರು.
ಸಾಹಿತಿ ಅಜಯ ಜಾಗೀರದಾರ್ ಮಾತನಾಡಿ, ಎಂ.ಜಿ. ಗಂಗನಪಳ್ಳಿ ಸಾಹಿತ್ಯ ಸೇವೆ ಅವಿಶ್ರಾಂತವಾಗಿದೆ. ಅವರ ಜೀವನ ಸಾಹಿತ್ಯಕ್ಕೆ ಮೀಸಲಾಗಿದೆ. 50ಕ್ಕೂ ಅಧಿಕ ಕೃತಿಗಳನ್ನು ರಚಿಸಿರುವ ಅವರಿಂದ ಇನ್ನಷ್ಟು ಸಾಹಿತ್ಯ ಸೇವೆ ನಡೆಯಲಿ ಎಂದು ಆಶಿಸಿದರು.
ಹಿರಿಯ ಸಾಹಿತಿ ಎಂ.ಜಿ. ಗಂಗನಪಳ್ಳಿ ಮಾತನಾಡಿ, ದೇಶದ ಜನರಲ್ಲಿ ಶಾಂತಿ, ಸಹಬಾಳ್ವೆ ಭಾವ ಮೂಡಿಸುವಲ್ಲಿ ಸಂಗೀತ ಮತ್ತು ಸಾಹಿತ್ಯ ಪರಿಣಾಮಕಾರಿ ಸಾಧನವೆನಿಸಿವೆ. ಹೀಗಾಗಿ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಸರ್ಕಾರ ಮತ್ತು ಸಂಘ-ಸಂಸ್ಥೆಗಳು ನೀಡಬೇಕಿದೆ ಎಂದು ಹೇಳಿದರು.
ಬೀದರ್ ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಪರಮೇಶ್ವರ ನಾಯಕ್ ಮಾತನಾಡಿ, ಶರಣರು, ಸಂತರ ನೆಲೆಯಾಗಿರುವ ಬೀದರ್ ಜಿಲ್ಲೆಯಲ್ಲಿ ಸಾಹಿತ್ಯ, ಸಂಸ್ಕೃತಿ ವಾತಾವರಣ ಹೇರಳವಾಗಿದೆ. ಅನೇಕ ಸಾಧು-ಸಂತರ ಕರ್ತೃ ಗದ್ದುಗೆ, ಮಂದಿರಗಳು ಸಾಕಷ್ಟಿವೆ. ಅವುಗಳ ಚರಿತ್ರೆ ಹೊರತರಬೇಕಾಗಿದೆ. ಬೀದರ್ ವಿಶ್ವವಿದ್ಯಾಲಯ ಸಾಹಿತ್ಯ ಕಾರ್ಯಗಳಿಗೆ ಸದಾ ಸಹಕಾರ ನೀಡಲಿದೆ ಎಂದರು.
ಡಾ.ಪೃಥ್ವಿರಾಜ ಎಸ್.ಲಕ್ಕಿ ಮಾತನಾಡಿದರು. ಪ್ರಮುಖರಾದ ಡಾ.ರಾಮಚಂದ್ರ ಗಣಾಪುರ, ರಾಮರಾವ್ ಗಂಗನಪಳ್ಳಿ, ಪ್ರಕಾಶ ಕುಲಕರ್ಣಿ, ಅಭಯ ಜಾಗೀರದಾರ್, ರುಕ್ಮೊದ್ದೀನ್ ಇಸ್ಲಾಂಪುರ, ರಮೇಶ ಜಾಗೀರದಾರ್, ಬಾಬುರಾವ್ ಕುಲಕರ್ಣಿ, ಸಂಜೀವಕುಮಾರ ಅತಿವಾಳೆ ಇತರರಿದ್ದರು.