ಶಿವಮೊಗ್ಗ: ಮಾತೃಭೂಮಿ, ಮಾತೃ ಭಾಷೆ ಮತ್ತು ಮಾತೃ ಭಾವ ನಮ್ಮ ಬದುಕಿನ ಧ್ಯೇಯವಾಗಬೇಕು. ನಮ್ಮ ಮನೆ, ಮನ, ಮಕ್ಕಳಲ್ಲಿ ಭೂಮಿ, ಭಾಷೆ ಮತ್ತು ಭಾವದ ಬಗ್ಗೆ ಹೇಳಿಕೊಟ್ಟರೆ ಅತ್ಯಾಚಾರ, ಭ್ರಷ್ಟಾಚಾರ, ಅನಾಚಾರ ಇಲ್ಲದ ಭಾರತವನ್ನು ಸೃಷ್ಟಿಸಲು ಸಾಧ್ಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ.ವಸಂತ್ಕುಮಾರ್ ಹೇಳಿದರು.
ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾ, ಶ್ರಮದ ಸಂಸ್ಕೃತಿಯ ಬದುಕಿನ ಮೌಲ್ಯವನ್ನು ಸಾಹಿತ್ಯ ಕಲಿಸಿಕೊಡುತ್ತಿದೆ. ಸಾಹಿತ್ಯಕ್ಕೆ ಯಾವುದೇ ಪಂಥವಿಲ್ಲ. ಎಲ್ಲ ಎಲ್ಲೆಗಳನ್ನು ಮೀರಿ ವಿಸ್ತಾರವಾಗಿ ಬೆಳೆಯುತ್ತಿದೆ ಎಂದರು.
ರಾಜಕೀಯ ಹಿನ್ನ್ನೆಲೆಯಲ್ಲಿ ಎಡ, ಬಲ ಪಂಥೀಯ ಎಂಬ ವಾಗ್ವಾದಗಳು ನಡೆಯುತ್ತಲೇ ಇರುತ್ತವೆ. ಆದರೆ ಇಂದಿನ ಬರಹಗಾರರು ಎಡ ಮತ್ತು ಬಲ ಪಂಥಗಳಿಂದ ಹೊರ ಬಂದಿದ್ದಾರೆ. ಸಮಾಜದ ಕಟ್ಟ ಕಡೆಯ ಜನರಿಗೂ ಒಳ ಮೀಸಲಾತಿ ಸಿಗಬೇಕು ಎಂದು ಧ್ವನಿ ಎತ್ತುತ್ತಿದ್ದಾರೆ. ಈ ಮೂಲಕ ಸಾಮರಸ್ಯ ಸಾಹಿತ್ಯದ ಯುಗ ಆರಂಭವಾಗಿದ್ದು ಹೋರಾಟದ ಬದುಕಿನ, ಜೀವನ ಅನುಭವದ ಅಂಶಗಳು ಸಾಹಿತ್ಯ ರೂಪದಲ್ಲಿ ಮೂಡಿಬರುತ್ತಿವೆ. ಎಲ್ಲ ಸಾಹಿತಿಗಳು ಸವೋದಯದ ಪರಿಕಲ್ಪನೆಯಲ್ಲಿ ಭಾವಗಳನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸುತ್ತಿದ್ದಾರೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿರುವ ಕಸಾಪ ಸೀಮಿತ ಪ್ರದೇಶಗಳಲ್ಲಿ ಸಾಹಿತ್ಯ ಚಟುವಟಿಕೆ ನಡೆಸುತ್ತದೆ ಎಂಬ ಆರೋಪವಿತ್ತು. ಆದರೆ ಇಂದು ಸಾಹಿತ್ಯ ಕೃಷಿ ಗ್ರಾಮೀಣ ಮಟ್ಟದಲ್ಲೂ ಬೆರೆತುಹೋಗಿದೆ. ಊರಕೇರಿಯ ಸಾಧಕರ ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸ ಪರಿಷತ್ನಿಂದ ನಡೆಯುತ್ತಿದೆ ಎಂದು ಹೇಳಿದರು.
ಮೇಯರ್ ಸುವರ್ಣಾ ಶಂಕರ್ ಮಾತನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ವಿಜಯಾ ಶ್ರೀಧರ್, ಉಪಮೇಯರ್ ಸುರೇಖಾ ಮುರಳೀಧರ್, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ.ಯೋಗೇಶ್, ಕಸಾಪ ಪದಾಧಿಕಾರಿಗಳಾದ ಎಂ.ಎನ್.ಸುಂದರ್ರಾಜ್, ರುದ್ರಮುನಿ ಸಜ್ಜನ್, ಜಿ.ಪಿ.ಸಂಪತ್ಕುಮಾರ್, ಚನ್ನಬಸಪ್ಪ ನ್ಯಾಮತಿ, ಹಸನ್ ಬೆಳ್ಳಿಗನೂಡು, ಚಂದ್ರಕಲಾ ಅರಸ್, ಮುಖಂಡರಾದ ಎಸ್.ಪಿ.ಶೇಷಾದ್ರಿ, ಎಸ್.ಪಿ.ದಿನೇಶ್, ಸಿದ್ದಬಸಪ್ಪ, ಡಿ.ಬಿ.ರುದ್ರಪ್ಪ ಇತರರಿದ್ದರು.
ಡೊಳ್ಳು, ವಾದ್ಯದೊಂದಿಗೆ ಮೆರವಣಿಗೆ: ಗೋಪಾಳ ವೃತ್ತದಿಂದ ಸಾಹಿತ್ಯ ಗ್ರಾಮದವರೆಗೆ ಡಾ. ವಿಜಯಾದೇವಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮುಖಾಂತರ ಕರೆತರಲಾಯಿತು. ಡೊಳ್ಳು ಕುಣಿತ, ವಾದ್ಯ, ಜೋಗಿ ಪದದ ತಂಡ ಭಾಗವಹಿಸಿದ್ದವು. ಕೆಳದಿ ಶಿವಪ್ಪನಾಯಕ ವೇಷಧಾರಿ ಮೆರವಣಿಗೆ ಆಕರ್ಷಕ ಕೇಂದ್ರವಾಗಿತ್ತು.