ಜಿಲ್ಲೆ

ಸಾಹಿತ್ಯ ಕ್ಷೇತ್ರಕ್ಕೆ ಎಚ್ಚೆಸ್ವಿ ಸಲ್ಲಿಸಿರುವ ಕೊಡುಗೆ ಅನನ್ಯ

ಚನ್ನರಾಯಪಟ್ಟಣ: ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆ ಅನನ್ಯವಾದುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎನ್.ಅಶೋಕ್ ಬಣ್ಣಿಸಿದರು.

ಪಟ್ಟಣದ ಶಾಲಿನಿ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹಾಗೂ ಶಾಲಿನಿ ವಿದ್ಯಾಶಾಲೆಯ ವತಿಯಿಂದ ಸೋಮವಾರ ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಅನುವಾದ, ವಿಮರ್ಶೆ ಸೇರಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಸಾಹಿತಿಯಾಗಿದ್ದರು. ಜತೆಗೆ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದರು. ಅವರ ತತ್ವ, ಸಿದ್ಧಾಂತ, ಆದರ್ಶಗಳು ಯುವ ಜನಾಂಗಕ್ಕೆ ಮಾದರಿಯಾಗಬೇಕು. ಕೆಲ ವರ್ಷಗಳ ಹಿಂದೆ ಹಾಸನದಲ್ಲಿ ಜರುಗಿದ್ದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಸಾಹಿತ್ಯದ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿದ್ದರು ಎಂದು ಸ್ಮರಿಸಿದರು.

ಮಕ್ಕಳ ಸಾಹಿತ್ಯ ಪರಿಷತ್ ಸಂಚಾಲಕ ಜಯರಾಂ, ಗೌರವಾಧ್ಯಕ್ಷ ಮಹದೇವ್, ಶಿಕ್ಷಕಿ ಮಧುಮತಿ ಮಾತನಾಡಿದರು. ಕಲಾವಿದರಾದ ರೂಪಾ, ಸಿ.ಜಿ. ಸೋಮಶೇಖರ್, ಮೇಘನಾ, ಅನುಪಮಾ ಹಾಗೂ ವಿದ್ಯಾರ್ಥಿಗಳು ವೆಂಕಟೇಶ ಮೂರ್ತಿ ರಚಿಸಿದ್ದ ಭಾವಗೀತೆಯನ್ನು ಹಾಡುವ ಮೂಲಕ ನುಡಿನಮನ ಸಲ್ಲಿಸಿದರು.

ಮಕ್ಕಳ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಜಗದೀಶ್, ನಟೇಶ್, ಹರೀಶ್, ಲಕ್ಷ್ಮೀನಾರಾಯಣ್ ಗುಪ್ತ, ಸಿ.ಎಸ್.ಮನೋಹರ್, ವಿದ್ಯಾಶಾಲೆಯ ಮುಖ್ಯ ಶಿಕ್ಷಕಿ ದೀಪ್ತಿ ಸೋಪಿಯಾ, ಶಿಕ್ಷಕಿ ಸಂಧ್ಯಾ ಇದರು.