ಗೋಣಿಕೊಪ್ಪಲು: ಗೋಣಿಕೊಪ್ಪಲು ಕಾವೇರಿ ಕಾಲೇಜು ಐ.ಕ್ಯೂ.ಎ.ಸಿ, ಇಂಗ್ಲೀಷ್, ಕನ್ನಡ ಹಾಗೂ ಹಿಂದಿ ವಿಭಾಗಗಳ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ, 2025-26 ನೇ ಸಾಲಿನ ಸಾಹಿತ್ಯ ಸಂಘದ ಉದ್ಘಾಟನೆಯನ್ನು ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಪತ್ರಕರ್ತ ಎಂ. ಸಂತೋಷ್ ತಮ್ಮಯ್ಯ ನೆರವೇರಿಸಿದರು.
ಸಾಹಿತ್ಯವು ವ್ಯಕ್ತಿಯಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುತ್ತದೆ. ಸಾಹಿತ್ಯ ಓದುವುದರಿಂದ ವ್ಯಕ್ತಿಯ ಚಿಂತನೆಯ ಸಾಮರ್ಥ್ಯ, ಕಲ್ಪನಾ ಶಕ್ತಿ ಮತ್ತು ಭಾವನಾತ್ಮಕ ಗ್ರಹಿಕೆ ಬೆಳೆಯುತ್ತದೆ. ಇದು ವ್ಯಕ್ತಿಯನ್ನು ಉತ್ತಮ ಮಾನವನನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಿದೆ. ಸಮಾಜದ ಬೆಳವಣಿಗೆ, ಸಂಸ್ಕೃತಿಯ ಅಸ್ತಿತ್ವ, ಇತಿಹಾಸ ಮತ್ತು ವಿಜ್ಞಾನವನ್ನು ತಿಳಿದುಕೊಳ್ಳಲು ಸಾಹಿತ್ಯದ ಅಭ್ಯಾಸದಿಂದ ಸಾಧ್ಯ. ಯಾವುದೇ ಭಾಷೆ ಇರಲಿ, ಸಾಹಿತ್ಯವನ್ನು ಕಲಿಯುವ ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆ ಇಲ್ಲದೆ, ಆಸಕ್ತಿಯಿಂದ ಮುಂದುವರೆದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದು ಅದ್ಭುತವಾದ ಕಲೆ ಇರುತ್ತದೆ. ಅದನ್ನು ಹೊರ ತರುವ ಕೆಲಸವನ್ನು ಮಾಡಿದಾಗ ಮಾತ್ರ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿರುವ ರಾಕ್ಷಸೀಯ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಿ, ಸರ್ವರಿಗೂ ಹಿತವನ್ನು ಉಂಟುಮಾಡುವ ಗುಣವನ್ನು ಸಾಹಿತ್ಯವು ಕಲಿಸುತ್ತದೆ ಎಂದರು.
ಉಪ ಪ್ರಾಂಶುಪಾಲೆ ಪ್ರೊ.ಎಂ. ಎಸ್. ಭಾರತಿ, ಐಕ್ಯೂಎಸಿ ಸಂಚಾಲಕಿ ಡಾ.ನಯನಾ ತಮ್ಮಯ್ಯ, ಕನ್ನಡ ಭಾಷಾ ಉಪನ್ಯಾಸಕ ಪ್ರೊ.ಅರ್. ತಿಪ್ಪೇಸ್ವಾಮಿ, ಆಂಗ್ಲ ಭಾಷಾ ಉಪನ್ಯಾಸಕಿ ಸಿ.ಪಿ. ಸುಜಯಾ, ಹಿಂದಿ ಭಾಷಾ ಮುಖ್ಯಸ್ಥೆ ಡಾ.ಪಿ.ಪಿ. ಸವಿತಾ, ಉಪನ್ಯಾಸಕರು ಇದ್ದರು.