ಹುಬ್ಬಳ್ಳಿ: ಸಾಹಿತ್ಯವನ್ನು ಅಭ್ಯಾಸ ಮಾಡುವುದರಿಂದ ಸಂಸ್ಕೃತಿ ಬೆಳೆಯುತ್ತದೆ. ಕಲ್ಲೊಂದು ಮೂರ್ತಿಯ ರೂಪ ಪಡೆದು ಹೇಗೆ ಎಲ್ಲರಿಂದಲೂ ಪೂಜೆ, ಆರಾಧನೆಗೊಳಪಡುತ್ತದೆಯೋ ಹಾಗೇ ಸಾಹಿತ್ಯವು ವ್ಯಕ್ತಿಗೆ ಸಭ್ಯತೆಯನ್ನು ಕಲಿಸುತ್ತದೆ ಎಂದು ಜಾನಪದ ವಿದ್ವಾಂಸ, ಇಳಕಲ್ಲನ ವಿಶ್ರಾಂತ ಪ್ರಾಚಾರ್ಯ ಡಾ. ಶಂಭು ಬಳಿಗಾರ ಹೇಳಿದರು.
ಇಲ್ಲಿಯ ಉಣಕಲ್ಲ ಕೆರೆ ಬಳಿಯ ಸಿದ್ದಪ್ಪಜ್ಜನ ಮಠದ ಆವರಣದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಹುಬ್ಬಳ್ಳಿ ನಗರ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಸುಸಂಸ್ಕೃತರಾಗಬೇಕಾದರೆ ಮೊದಲು ಪಾಲಕರು ಒಳ್ಳೆಯವರಾಗಬೇಕು. ಸಭ್ಯತೆ ರೂಢಿಸಿಕೊಳ್ಳಬೇಕು. ಆನಂತರ ಮಕ್ಕಳಿಗೆ ಹೇಳಬೇಕು. ಇಂತಹ ಪದ್ಧತಿ ಎಲ್ಲರ ಮನೆಯಲ್ಲಿ ನಡೆದರೆ ಉತ್ತಮ ಸಮಾಜ ನಿರ್ವಿುಸಲು ಸಾಧ್ಯವಾಗುತ್ತದೆ ಎಂದರು.
ಆಶಯ ನುಡಿ ಪ್ರಸ್ತುತ ಪಡಿಸಿದ ಸಾಹಿತಿ ಮಹಾಂತಪ್ಪ ನಂದೂರ, ಸಾಹಿತ್ಯ ಎಂದರೆ ಸಹಿತ, ಸ್ವಹಿತ, ಸಮಾಜದ ಹಿತವಾಗಿದೆ. ನಗರ ಜೀವನದ ದುಗುಡಗಳು ಹಲವಾರು. ಆಧುನಿಕತೆ, ಅಕ್ಷರತೆ, ಯಾಂತ್ರಿಕತೆ, ಮನೋಒತ್ತಡಗಳಿಂದಾಗಿ ನಗರಗಳು ಬಳಲುತ್ತಿವೆ. ಇವೆಲ್ಲವುಗಳಿಗೆ ಸಾಹಿತ್ಯದ ಸ್ಪರ್ಶ ಸಿಕ್ಕರೆ ಒಂದಿಷ್ಟು ನಿರಾಳತೆ, ಸುನಾದ ಹೊರಡಲು ಸಾಧ್ಯ ಎಂದರು.
ಸೌಂದರೀಕರಣ ಅರ್ಥಪೂರ್ಣವಾಗಲಿ: ಸಮ್ಮೇಳನದ ಸರ್ವಾಧ್ಯಕ್ಷ ಸಿ.ಬಿ. ಮರಿಗೌಡ್ರ ಮಾತನಾಡಿ, ಉಣಕಲ್ಲ ಕೆರೆ ಸೌಂದರೀಕರಣ ಮಾಡುತ್ತಿರುವುದು ಒಳ್ಳೆಯದು. ಆದರೆ, ಕೆರೆ ಸುತ್ತ ಸಾಹಿತಿ, ಕಲಾವಿದರ ಪುತ್ಥಳಿ ಸ್ಥಾಪಿಸಿ, ಅವರ ಪರಿಚಯ ಬರೆಸಬೇಕು. ಇದರಿಂದ ಮಕ್ಕಳಿಗೆ ಸಹಾಯವಾಗುತ್ತದೆ ಎಂದರು. ಇದರೊಂದಿಗೆ ಕನ್ನಡ ಕಟ್ಟಿದವರು, ಕನ್ನಡದ ಸ್ಥಿತಿಗತಿ, ಅದನ್ನು ಬೆಳೆಸಬೇಕಾದ ರೀತಿ, ಸಾಹಿತ್ಯಕವಾಗಿ ಹುಬ್ಬಳ್ಳಿಯ ಬೆಳವಣಿಗೆ ಹಾಗೂ ಡಾ. ವಿಜಯ ಸಂಕೇಶ್ವರ ಸೇರಿ ಹಿರಿಯರಿಂದ ವಾಣಿಜ್ಯ ಕೇಂದ್ರವಾಗಿ ಬೆಳೆದ ಬಗೆಯನ್ನು 40 ನಿಮಿಷದ ತಮ್ಮ ಭಾಷಣದಲ್ಲಿ ವಿವರಿಸಿದರು.
ಚಂದ್ರಮೌಳಿ ಸ್ಮರಣ ಸಂಚಿಕೆಯನ್ನು ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ ಬಿಡುಗಡೆ ಮಾಡಿದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಅಧ್ಯಕ್ಷತೆ ವಹಿಸಿದ್ದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಗೋವಿಂದ ಮಣ್ಣೂರ ಅವರು ಮಾತನಾಡಿದರು.
ಡಾ. ಸಿದ್ದಯ್ಯ ಹಿರೇಮಠ, ರಾಮಚಂದ್ರ ಪತ್ತಾರ, ಐ.ಜಿ. ಸನದಿ, ಪ್ರೊ. ಕೆ.ಎಸ್. ಕೌಜಲಗಿ, ಡಾ. ಬಿ.ಎಸ್. ಮಾಳವಾಡ, ಸದಾನಂದ ಡಂಗನವರ, ಡಾ. ಶರಣಪ್ಪ ಕೊಟಗಿ, ಚನ್ನಬಸಪ್ಪ ಧಾರವಾಡಶೆಟ್ರ, ಗಂಗಾಧರ ದೊಡ್ಡವಾಡ, ಸಂಧ್ಯಾ ದೀಕ್ಷಿತ, ಪದ್ಮಜಾ ಉಮರ್ಜಿ, ಇತರರು ಇದ್ದರು.
ಕಸಾಪ ನಗರ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ ಸ್ವಾಗತಿಸಿದರು. ವಿರುಪಾಕ್ಷ ಕಟ್ಟಿಮನಿ ನಿರೂಪಿಸಿದರು. ಆರ್.ಎಂ. ಗೋಗೇರಿ ನಿರ್ವಹಣೆ ಮಾಡಿದರು.
ಮೆರವಣಿಗೆ: ಶನಿವಾರ ಬೆಳಗ್ಗೆ ಉಣಕಲ್ಲ ಚಂದ್ರಮೌಳೇಶ್ವರ ದೇವಸ್ಥಾನದಿಂದ ಆರಂಭವಾದ ಸಮ್ಮೇಳನಾಧ್ಯಕ್ಷರು ಹಾಗೂ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆಗೆ ಪಾಲಿಕೆ ಸಭಾನಾಯಕ ತಿಪ್ಪಣ್ಣ ಮಜ್ಜಗಿ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಸರ್ವಾಧ್ಯಕ್ಷ ಸಿ.ಬಿ. ಮರಿಗೌಡ್ರ ಅವರ ಸಾಹಿತ್ಯ ಕೃಷಿ, ಸಾಕ್ಷ್ಯಚಿತ್ರ ಮುಂತಾದವುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.