ಜಿಲ್ಲೆ

ಸಾಹಿತಿಗಳು ಮತ್ತು ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

ಚಾಮರಾಜನಗರ: ಜಿಲ್ಲೆಯಲ್ಲಿರುವ ಸಾಹಿತಿಗಳು, ಬರಹಗಾರರು ಹಾಗೂ ವಿವಿಧ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಮೂಲಕ ಅವರ ಕಲೆಯನ್ನು ಬೆಂಬಲಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಡಾ.ರೇಣುಕಾದೇವಿ ಅಭಿಪ್ರಾಯಪಟ್ಟರು.

ನಗರದ ವಾಲ್ಮೀಕಿ ಭವನದಲ್ಲಿ ಅನುಪಮ ಟ್ರಸ್ಟ್, ಸೃಷ್ಠಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಅನುಪಮ ಟ್ರಸ್ಟ್ ಉದ್ಘಾಟನೆ ಮತ್ತು ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿಸಿದರು.

ಜಿಲ್ಲೆಯಲ್ಲಿ ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ ಜಾನಪದ ಮಹಾಕಾವ್ಯಗಳು ಇದ್ದು, ಜಗತ್ತಿನಲ್ಲೇ ಗುರುತಿಸಲ್ಪಡುತ್ತಿದೆ. ಈ ಜಾನಪದ ಪರಂಪರೆ ನಿರಂತರವಾಗಿ ಸಾಗುತ್ತಾ ಬಂದಿದ್ದು, ಈಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜಾನಪದ ಕಲಾವಿದರು ಇದ್ದಾರೆ. ಹಲವಾರು ಸಾಹಿತಿ ಮತ್ತು ಬರಹಗಾರರಿಗೆ ಈ ಜಾನಪದ ಮಹಾಕಾವ್ಯಗಳು ನೆರವಾಗಿದೆ. ಪ್ರಸ್ತುತ ಸಂರ್ಭದಲ್ಲಿ ಅಂತವರನ್ನು ಗೌರವಿಸುವ ಕೆಲಸಗಳು ಹೆಚ್ಚಾಗಬೇಕಿದೆ ಎಂದರು.

ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಪ್ರಾರಂಭವಾಗುತ್ತಿರುವ ಅನುಪಮ ಟ್ರಸ್ಟ್ ಸಮಾಜಕ್ಕೆ ಉತ್ತಮವಾದ ಕೆಲಸಗಳನ್ನು ಮಾಡಲಿ. ಪ್ರಾರಂಭದಲ್ಲೇ ರಾಜ್ಯಾದ್ಯಂತ ಕಲಾವಿದರು, ಸಾಹಿತಿಗಳು ಹಾಗೂ ಇನ್ನಿತರೆ ಸಾಧಕರನ್ನು ಕರೆಸಿ ಸನ್ಮಾನಿಸುತ್ತಿರುವುದು ಅತ್ಯಂತ ಉತ್ತಮ ಕೆಲಸವಾಗಿದೆ. ಸಾಮಾಜಮುಖಿ ಕೆಲಸಗಳೊಂದಿಗೆ ನಾವು ಸದಾ ಜತೆಯಾಗಿರುತ್ತೇವೆ ಎಂದು ಹೇಳಿದರು.

ಅನುಪಮಾ ಟ್ರಸ್ಟ್ ಅಧ್ಯಕ್ಷೆ ಡಾ.ಪಿ.ಪ್ರೇಮಾ ಮಾತನಾಡಿ, ಇತ್ತೀಚೆಗೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಅವರಿಗೆ ಕಾನೂನು ನೆರವನ್ನು ನೀಡುವುದು ಅಗತ್ಯ ಕರ್ತವ್ಯವಾಗಿದೆ. ಸಾಮಾಜಿಕ ಸೇವೆ ಮತ್ತು ಎಲೆಮರೆ ಕಾಯಿಯಂತಿರುವ ಸಾಹಿತಿಗಳು, ಬರಹಗಾರರು ಹಾಗೂ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಟ್ರಸ್ಟ್ ಪ್ರಾರಂಭಿಸಲಾಗಿದೆ. ಜನಪರವಾದ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುವುದರ ಜತೆಗೆ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಉದ್ದೇಶವನ್ನು ಹೊಂದಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಹಿತಿಗಳು, ಕವಿಗಳು, ಕಲಾವಿದರು, ಸಾಮಾಜ ಸೇವಕರು ಹಾಗೂ ಇನ್ನಿತರೆ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಂಟಿ ನಿರ್ದೇಶಕಿ ಲಕ್ಷ್ಮಮ್ಮ,

ಯುವ ವಿಜ್ಞಾನಿ ಡಾ.ನವೀನ್ ಮೌರ್ಯ, ಡಾ.ಎನ್.ಚಂದು ಜಾದವ್, ನಾಗಸಿಂಹ, ಸಾವಿತ್ರಿ ಭಾುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಭವಾನಿ ದೇವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಮಸ್ವಾಮಿ, ಸೃಷ್ಠಿ ಗ್ರಾಮೀಣ ಸಂಸ್ಥೆ ಅಧ್ಯಕ್ಷ ಎಚ್.ಬಿ.ವೃಷಭೇಂದ್ರ ಹಾಗೂ ಇತರರು ಹಾಜರಿದ್ದರು.