ಚನ್ನಮ್ಮನ ಕಿತ್ತೂರು: ಬಂಜಾರ ಸಂಘ ಮತ್ತು ಬರಹವೇ ಶಕ್ತಿ ವೇದಿಕೆ ಕನ್ನಡ ನಾಡು, ನುಡಿ ಸಂಸ್ಕೃತಿಗಾಗಿ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಅಮೀನಗಡ ಕೇಂದ್ರ ಘಟಕದ ವಿಶ್ವ ಬಂಜಾರ ಕಲಾ ಸಾಹಿತ್ಯಿಕ ಸಂಘ ಹಾಗೂ ಬರಹವೇ ಶಕ್ತಿ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬರಹವೇ ಶಕ್ತಿ ವೇದಿಕೆಯ ದ್ವಿತೀಯ ಸಾಹಿತ್ಯ ಸಮ್ಮೇಳನ, ಜಿಲ್ಲಾ ಘಟಕ ಉದ್ಘಾಟನೆ, ಪದಗ್ರಹಣ, ಕೃತಿ ಲೋಕಾರ್ಪಣೆ, ಕವಿಗೋಷ್ಠಿ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಸರ್ಕಾರವೇ ಇಂಗ್ಲಿಷ್ ಶಾಲೆ ತೆರೆದು ಕನ್ನಡಕ್ಕೆ ಹಿನ್ನಡೆಯಾಗುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಚಲನಚಿತ್ರ ನಟ ರಮೇಶ ಪರವಿನಾಯ್ಕರ ಮಾತನಾಡಿ, ಸರ್ಕಾರ ರಾಣಿ ಚನ್ನಮ್ಮ ಉತ್ಸವಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಆದರೆ ಚನ್ನಮ್ಮಳ ನೈಜ ಇತಿಹಾಸ ತೋರಿಸುವ ಕೆಲಸ ಮಾಡಬೇಕು. ಕೆಲವರು ಇತಿಹಾಸ ತಿರುಚಿದ್ದು, ಅದಕ್ಕೆ ಅಂತ್ಯ ಹಾಡಬೇಕು ಎಂದರು.
ಎಚ್.ಎಸ್. ಗೌಡರ ಪ್ರಾಸ್ತಾವಿಕ ಮಾತನಾಡಿದರು. ಮೀನಾಕ್ಷಿ ಸೂಡಿ ಮಾತನಾಡಿದರು. ಶ್ರೀಗಳು, ಮಾಜಿ ಸೈನಿಕ ಡಾ. ಎಸ್.ಪಿ. ಹಿರೇಮಠ, ವಿಜಯಪುರದ ಹಿರಿಯ ಸಾಹಿತಿ ಇಂದುಮತಿ ಲಮಾಣಿ, ಕಲಬುರಗಿಯ ಡಾ. ಪ್ರಮೀಳಾ ಪಾಟೀಲ, ಗದಗ ಜಾನಪದ ಕಲಾವಿದ ಸುರೇಶ ಲಮಾಣಿಗೆ ಬಸವ ಸೇವಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಲವರಿಗೆ ಚನ್ನಮ್ಮ ಬರಹಸಿರಿ, ರಾಯಣ್ಣ ಬರಹ ಮಾಣಿಕ್ಯ ಪ್ರಶಸ್ತಿ ವಿತರಿಸಲಾಯಿತು. ೨೫ ಕವಿಗಳು ಭಾಗವಹಿಸಿದ್ದರು.
ಡಾ. ಪ್ರಮೀಳಾ ಪಾಟೀಲ ರಚಿತ ವಚನದಾರಿ ಪುಸ್ತಕ ಬಿಡುಗಡೆಯಾಯಿತು. ಸರ್ವಾಧ್ಯಕ್ಷ ಡಾ. ಎಸ್.ಬಿ. ದಳವಾಯಿ, ಜೇನು ಜ್ಯೋತಿ ನಾಯ್ಕ, ಆರ್. ನರಸಿಂಹ ಮೂರ್ತಿ, ಎಚ್.ವೈ. ರಾಠೋಡ, ಜಾನಕಿ ಭದ್ರನ್ನವರ, ಸಿ.ವೈ. ಮೆಣಸಿನಕಾಯಿ, ಚಂದ್ರಕಾಂತ ಚವ್ಹಾಣ, ಎ.ಎಸ್. ಗಡದವರ, ಮಹಾಂತೇಶ ಮುದಕನಗೌಡರ, ಡಾ. ಸುನೀಲ ಪರೀಟ್, ಚಂದ್ರಕಾಂತ ಚನ್ನಂಗಿ, ಅಶೋಕ ಚಿಕ್ಕಡೆಗೆ, ಎಂ.ಜಿ. ನಾಶಿಪುಡಿ, ಮಲ್ಲಿಕಾರ್ಜುನ ಸಜ್ಜನ, ರಾಜು ಹಕ್ಕಿ, ಶ್ವೇತಾ ಕಾಡನ್ನವರ, ಮಂಜುಳಾ ಕಾಡನ್ನವರ ಇತರರಿದ್ದರು.