ಜಿಲ್ಲೆ

ಸಾಹಿತಿ ಬಿ.ಟಿ.ಲಲಿತಾ ನಾಯ್ಕ ಅವರಿಗೆ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ ನಾಳೆ

ಡಿ. ಎಂ. ಮಹೇಶ್

ದಾವಣಗೆರೆ: ಶರಣ ಆರೂಢ ದಾಸೋಹಿ ಮಾಗನೂರು ಬಸಪ್ಪ ರಾಜ್ಯಮಟ್ಟದ ಪ್ರಶಸ್ತಿಗೆ ಸಾಹಿತಿ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯ್ಕ ಅವರು ಭಾಜನರಾಗಿದ್ದು ಆ. 26 ರಂದು ದಾವಣಗೆರೆಯ ಕನ್ನಡ ಕುವೆಂಪು ಭವನದಲ್ಲಿ ಪ್ರದಾನ ಮಾಡಲಾಗುತ್ತಿದೆ.

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಲಲಿತಾ ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಶಸ್ತಿಯು 50,000 ರೂ.ನಗದು ಹಾಗೂ ಫಲಕ ಒಳಗೊಂಡಿರುತ್ತದೆ. ಶನಿವಾರ ಬೆಳಗ್ಗೆ 11ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಚಿಕ್ಕಮಗಳೂರು ಬಸವತತ್ವ ಪೀಠದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ.ಸಂಗಮೇಶ್ವರ ಗೌಡ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಮನು ಬಳಿಗಾರ್ ಅಭಿನಂದನಾ ನುಡಿ ಆಡುವರು. ಮಾಗನೂರು ಬಸಪ್ಪ ಅವರ ವ್ಯಕ್ತಿತ್ವ ಕುರಿತು ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ ಕುರ್ಕಿ ಮಾತನಾಡುವರು ಎಂದು ತಿಳಿಸಿದರು. ವಚನ ಸಾಹಿತ್ಯ ಸಂಶೋಧನೆ, ವಚನ ಸಂಗೀತದಲ್ಲಿ ವಿಶೇಷ ಸಾಧನೆ, ಸಮಾಜಸೇವೆ ಮತ್ತು ಶಿಕ್ಷಣ ಪ್ರಸಾರ ಕ್ಷೇತ್ರದಲ್ಲಿ ಜಾಗೃತಿ ಕೈಗೊಂಡ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದುವರೆಗೆ 8 ಜನ ಸಾಧಕರು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಳೆಪ್ಪ, ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಆಡಳಿತಾಧಿಕಾರಿ ಎಸ್.ಆರ್.ಶಿರಗಂಬಿ, ಮಂಜುನಾಥ್, ಎನ್.ಟಿ.ಯರ‌್ರಿಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.