ಜಿಲ್ಲೆ

ಸಾಹಸ ಕಲೆಗಳು ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲಿ

ರಾಮನಗರ : ಸಾಹಸ ಕಲೆಗಳು ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಜತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪಠ್ಯದ ಜತೆಗೆ ಸಾಹಸ ಕಲೆಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ರಾಮನಗರದ ರಾಮದೇವರ ಬೆಟ್ಟದ ರಸ್ತೆಯಲ್ಲಿನ ಸಾಹಸ ಶಿಕ್ಷಣ ಕೇಂದ್ರದಲ್ಲಿ ಕರ್ನಾಟಕ ಸಾಹಸ ಕಲಾ ಅಕಾಡೆಮಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಖಿಲ ಭಾರತ ಶೌರ್ಯ ಕಲಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ವಿವಿಧೆಡೆಗಳಿಂದ ಸಾಹಸ ಕಲಾವಿದರನ್ನು ಕರೆಸಿ, ಆಯಾ ಪ್ರದೇಶದ ಸಾಹಸ ಕಲೆಗಳನ್ನು ಪ್ರದರ್ಶಿಸುತ್ತಿರುವುದು ಸಂತಸದ ಸಂಗತಿ. ಸಾಹಸ ಕಲಾ ಅಕಾಡೆಮಿಯ ಸಂಸ್ಥಾಪಕ ಡಾ.ಹಾಸನ ರಘು ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರ ಎಲ್ಲ ಪ್ರಯತ್ನಗಳಿಗೂ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಮಾತನಾಡಿ, ದೇಶದ ಹಲವು ದೇಶಿ ಕಲೆಗಳು ನಶಿಸುತ್ತಿರುವ ಸಮಯದಲ್ಲಿ ಅವುಗಳ ಬಗ್ಗೆ ಯುವಜನತೆಗೆ ಮಾಹಿತಿ ನೀಡುವ ಜತೆಗೆ ಯುವಕರಲ್ಲಿ ಸಾಹಸ ಕಲೆಗಳನ್ನು ಕಲಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಲ್ಲಕಂಬ ಪ್ರದರ್ಶನ, ಕೇರಳದ ಕಲ್ಲರಿ ಫೈಟ್, ಪಶ್ಚಿಮ ಬಂಗಾಳದ ರಾಯ್ಬೇಸಿ, ಕರ್ನಾಟಕದ ಬಳ್ಳಾರಿ ಇಂದ ಮೀಜಾ ಪೈಲ್ವಾನ್ ದೇಸಿ ಸಾಹಸ ಪ್ರದರ್ಶನ, ತಮಿಳುನಾಡಿನ ಜಲನಿ ಹಾಗೂ ಕನ್ಯಾಕುಮಾರಿಯ ಮೈತಿ ಎನ್ ರಾಜ್ ಅವರಿಂದ ಸಿಲಂಬಾಟಂ ಪ್ರದರ್ಶನ ಜತೆಗೆ ಪಾಂಡೀಚರಿಯ ರಾಜಕುಮಾರ್ ತಂಡದಿಂದ ಸಿಲಂಬಾಟಂ ಪ್ರದರ್ಶನ ನಡೆಯಿತು.

ನಗರಸಭಾ ಅಧ್ಯಕ್ಷ ಕೆ.ಶೇಷಾದ್ರಿ, ಖೆಲೋ ಇಂಡಿಯಾ ಕೇಂದ್ರದ ಗೌರವಾಧ್ಯಕ್ಷ ರಾಜಶೇಖರ್, ಸಾಹಸ ಕೇಂದ್ರದ ಗೌರವಾಧ್ಯಕ್ಷ ವಿ.ರಾಮಾಂಜನೇಯ ಇದ್ದರು.