ಜಿಲ್ಲೆ

ಸಾಸ್ವೆಹಳ್ಳಿ ಏತ ನೀರಾವರಿ ಕೆಲಸ ವರ್ಷಾಂತ್ಯಕ್ಕೆ ಮುಗಿಸಿ ಡಾ. ಶ್ರೀ ಶಿವಮೂರ್ತಿ ಸ್ವಾಮೀಜಿ ತಾಕೀತು

ದಾವಣಗೆರೆ: ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳ 121 ಕೆರೆಗಳಿಗೆ ನೀರು ತುಂಬಿಸುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ತರಳಬಾಳು ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಜಿಎಂಐಟಿ ಅತಿಥಿ ಗೃಹದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹೊನ್ನಾಳಿ, ಶಿವಮೊಗ್ಗ ಗ್ರಾಮಾಂತರ, ಚನ್ನಗಿರಿ, ಮಾಯಕೊಂಡ, ಹೊಳಲ್ಕೆರೆ, ಚಿತ್ರದುರ್ಗ ತಾಲ್ಲೂಕಿನ 121 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಸಾಸ್ವೆಹಳ್ಳಿ, ಚನ್ನೇಶಪುರ, ಜಕ್ಕಲಿ, ಮುತ್ತಗದೂರು ಪಂಪ್‌ಹೌಸ್‌ಗಳ ಕಾಮಗಾರಿ ಸಮಸ್ಯೆಗಳನ್ನು ಪರಿಹರಿಸಿಕೊಂಡು ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಿ, 2023 ರ ಜನವರಿ ವೇಳೆಗೆ ನೀರು ಒದಗಿಸಬೇಕು ಎಂದರು. ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕಾಮಗಾರಿಗೆ ಸಂಬಂಧಿಸಿದಂತೆ ಅಡೆತಡೆಗಳಿದ್ದರೆ ನನಗೆ ಅಥವಾ ಆಯಾ ಭಾಗದ ಶಾಸಕರ ಗಮನಕ್ಕೆ ತಂದರೆ ಸಮಸ್ಯೆ ಪರಿಹರಿಸಿ ಕೊಡಲಾಗುವುದು. ಕೆರೆಗಳಿಗೆ ನೀರು ತುಬಿಸುವ ಕೆಲಸಕ್ಕೆ ಆದ್ಯತೆ ನೀಡಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಮುತ್ತಗದೂರು, ಜಕ್ಕಲಿ ಹಾಗೂ ಚನ್ನೇಶಪುರ ಪಂಪ್‌ಹೌಸ್‌ಗಳು ಮತ್ತು ಬಿದರಗಡ್ಡೆ ಮೂಲಕ ಹಾದು ಬರುವ 11 ಕಿ.ಮೀ. ಮಾರ್ಗದಲ್ಲಿ ಬರುವ 49 ಗೋಪುರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಮಾಹಿತಿ ನೀಡುವಂತೆ ಹೇಳಿದರು. ಕೆಲವು ಕಡೆಗಳಲ್ಲಿ ಏತನೀರಾವರಿ ಯೋಜನೆಯ ಪೈಪ್‌ಪೈನ್ ಅಳವಡಿಕೆ ಬಾಕಿ ಇದ್ದು ರೈತರ ಮನವೂಲಿಸಲು ಕ್ರಮ ವಹಿಸಲಾಗುತ್ತದೆ. ನೀರನ್ನು ಮೇಲೆತ್ತಲು ಜಾಕ್‌ವೆಲ್ ಕಾಮಗಾರಿ, ವಿದ್ಯುತ್ ಸರಬರಾಜು ಕಾಮಗಾರಿ ಬಾಕಿ ಇದ್ದು ಪ್ರಗತಿ ಸಾಧಿಸಬೇಕು ಎಂದರು. 121 ಕೆರೆಗಳಲ್ಲಿ ಹೊನ್ನಾಳಿ ತಾಲ್ಲೂಕಿನ 4, ಶಿವಮೊಗ್ಗ ಗ್ರಾಮಾಂತರ 3, ಚನ್ನಗಿರಿ 72, ಹೊಳಲ್ಕೆರೆ 72 ಹಾಗೂ ಚಿತ್ರದುರ್ಗ ತಾಲ್ಲೂಕಿನ 1 ಕೆರೆಗೆ ನೀರು ತುಂಬಿಸಲಿದ್ದು ಇದರಿಂದ 116 ಗ್ರಾಮಗಳಿಗೆ ಅನುಕೂಲವಾಗಲಿದೆ. ಪೈಪ್ಲೈನ್ ಕಾಮಗಾರಿಗೆ 431 ಕೋಟಿ ರೂ. ನಿಗದಿ ಮಾಡಲಾಗಿದೆ. ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಮಾತನಾಡಿ ವಿದ್ಯುತ್ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು ರಾತ್ರಿ-ಹಗಲು ಕೆಲಸ ಮಾಡಬೇಕಾಗಿದೆ. ಎಲ್ಲಾ ಹಂತದಲ್ಲಿಯೂ ತಾಂತ್ರಿಕತೆ ಅಳವಡಿಸಿಕೊಂಡು ವೈಜ್ಞಾನಿಕವಾಗಿ ಕಾಮಗಾರಿ ಮಾಡಬೇಕು. ಪೈಪ್‌ಲೈನ್ ಗುಣಮಟ್ಟದಿಂದ ಕೂಡಿರಬೇಕು. ಭೂಸ್ವಾಧೀನಕ್ಕೆ ಕೆಲವೆಡೆ ವಿರೋಧವಿದೆ. ಸರ್ಕಾರದ ಮಾನದಂಡದಂತೆ ನಿಗದಿತ ಪರಿಹಾರ ಹಾಗೂ ಬೆಳೆ ಪರಿಹಾರ ನೀಡಿ ಭೂಮಿ ಪಡೆದು ಕಾಮಗಾರಿ ಮುಂದುವರೆಸಬೇಕೆಂದು ತಿಳಿಸಿದರು. ಸಭೆಯಲ್ಲಿ ಶಾಸಕರಾದ ಪ್ರೊ. ಎನ್.ಲಿಂಗಣ್ಣ, ಎಸ್.ವಿ. ರಾಮಚಂದ್ರ, ಮಾಡಾಳು ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಇತರರಿದ್ದರು.