ಜಿಲ್ಲೆ

ಸಾಸಲು ಗ್ರಾಮದಲ್ಲಿ ಮಾಣಿಕಶೆಟ್ಟಿ ಹಬ್ಬ

ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದಲ್ಲಿ ಇತ್ತೀಚೆಗೆ ಮಾಣಿಕಶೆಟ್ಟಿ(ಕತ್ತೆ ಮೇಲೆ ಮೆರವಣಿಗೆ) ಹಬ್ಬ ಭಕ್ತ ಸಮೂಹದೊಂದಿಗೆ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಹಬ್ಬದಲ್ಲಿ ಗ್ರಾಮದ ಜಂಗಮ ಅರ್ಚಕ ಸಮೂಹದ ಬಾಲಕ ಶ್ರೀಧರ್ ಶಿವನ ಸ್ವರೂಪದಲ್ಲಿ ಭಾಗವಹಿಸಿದ್ದರು. ಉಪವಾಸವಿದ್ದ ಬಾಲಕನಿಗೆ ಹಬ್ಬದ ಆಚರಣೆ ಪದ್ಧತಿಯಂತೆ ಇಜ್ಜಿಲು ಮಸಿಯ ಮೀಸೆ, ವಿಭೂತಿ ಧಾರಣೆ, ಕಣ್ಣಿಗೆ ಕಾಡಿಗೆ ಕಪ್ಪು ಹಾಕಿ, ತೆಂಗಿನಸೋಗೆ ಹಸಿರು ಗರಿಯ ಪೇಟವನ್ನು ಧರಿಸಲಾಗಿತ್ತು. ಬಾಳೆನಾರಿನ ಜನಿವಾರ ತೊಡಿಸಿ, ನೆರಳಿಗೆ ಚಾಮರದಂತೆ ಹಳೆಮರವನ್ನು ಹಿಡಿಯಲಾಯಿತು. ಸೋಮೇಶ್ವರ ದೇಗುಲದಲ್ಲಿ ಬಾಲಕನಿಗೆ, ದೇವರಿಗೆ ಹಾರ ಹಾಕಿ ಧೂಪ, ದೀಪದಿಂದ ಅರ್ಚಕರು ಆರತಿ ಬೆಳಗಿದರು.

ಬಾಲಕನಿಗೆ ಸೋಮೇಶ್ವರ ದೇವರು ಅವಾಹನೆಯಾಗಿ ಅರೆಪ್ರಜ್ಞೆಗೆ ಜಾರಿದಾಗ ಮಾಣಿಕಶೆಟ್ಟಿ ಮೇಲೆ ಕೂರಿಸಲಾಯಿತು. ಕತ್ತೆ ಮೇಲೆ ಆರೂಢನಾದ ಬಾಲಕನಿಗೆ ಮತ್ತೊಮ್ಮೆ ಆರತಿ, ಪಂಜಿನ ಆರತಿ ಬೆಳಗಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು. ನಂತರ ಭೈರವರಾಜರ ಗುಡಿ ಬೀದಿ, ಕುದುರೆ ಮಂಡಮ್ಮ ಬೀದಿ ಸೇರಿದಂತೆ ಗ್ರಾಮದ ಪ್ರಮುಖ ಬೀದಿಯಲ್ಲಿ ಬಾಲಕನನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು. ಭೈರವರಾಜರ ಗುಡಿಯಲ್ಲಿ ಶಿವಸ್ವರೂಪಿ ಬಾಲಕನಿಗೆ ಆರತಿ ಬೆಳಗಿ ತೀರ್ಥ ಪ್ರಸಾದ, ರಸಾಯನ ಭಕ್ತರಿಗೆ ಹಂಚಲಾಯಿತು. ಅಂತಿಮವಾಗಿ ಮಾಣಿಕಶೆಟ್ಟಿ ಮೇಲೆ ಆರೂಢನಾದ ಬಾಲಕನ ಮೆರವಣಿಗೆ ರಂಗಸ್ಥಳಕ್ಕೆ ಸಾಗಿತು. ರಂಗಮಂಟಪದಲ್ಲಿ ಬಾಲಕನನ್ನು ಕೂರಿಸಿ ಆರತಿ ಬೆಳಗಿ, ತೀರ್ಥ ಪ್ರೋಕ್ಷಣೆ ಮಾಡಿ ಹಬ್ಬಕ್ಕೆ ತೆರೆ ಎಳೆಯಲಾಯಿತು. ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು. ಶಿವಸ್ವರೂಪಿ ಬಾಲಕ, ಮಾಣಿಕಶೆಟ್ಟಿ ದೀಡು ನಮಸ್ಕಾರ ಹಾಕಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಭಕ್ತಿ ಪಂಥದ ಪ್ರತೀಕ ಈ ವಿಶಿಷ್ಟ ಹಬ್ಬ ಶಿವ ಹಾಗೂ ಭಕ್ತರ ನಡುವೆ ನಡೆದ ಭಕ್ತಿ ಪಂಥದ ಪ್ರತೀಕವಾಗಿದೆ. ಮಹಾಭಕ್ತ ಭೈರವರಾಜರ ಭಕ್ತಿಯನ್ನು ಪರೀಕ್ಷಿಸಲು ಶಿವ ಪಾರ್ವತಿಯರು ಮುಂದಾಗುತ್ತಾರೆ. ಆಗ ಭಕ್ತಿ ವಿಷಯದಲ್ಲಿ ಭೈರವರಾಜರು ವಿಜಯಿಯಾಗುತ್ತಾರೆ. ಭಕ್ತಿ ಸರ್ವಶ್ರೇಷ್ಠವಾಗಿದ್ದು ಭಕ್ತಿಗೆ ಸೋಲಿಲ್ಲ ಎಂದು ಜಗತ್ತಿಗೆ ಸಾರಿ ತಿಳಿಸಲು ಶಿವ ನುಡಿಯುತ್ತಾನೆ. ವರ್ಷಕ್ಕೊಮ್ಮೆ ಇಡೀ ಜಗತ್ತಿಗೆ ಭಕ್ತಿ, ಭಕ್ತನ ವಿಜಯ ಸಾಧನೆ ತೋರಿಸಬೇಕು. ಈ ಸಲುವಾಗಿ ಅಂದು ಬಾಲವೇಷಧಾರಿಯಾಗಿ ಬರುತ್ತೇನೆ. ತಾನು ಭಕ್ತನಿಗೆ ಮಣಿದಿರುವ ಕಾರಣ ಈ ಪವಿತ್ರ ದಿನ ತನ್ನ ವಾಹನವಾಗಿ ಮಾಣಿಕಶೆಟ್ಟಿ(ಕತ್ತೆ) ಮೇಲೆ ಮೆರವಣಿಗೆ ಮಾಡಬೇಕು ಎಂದು ತಿಳಿಸುತ್ತಾರೆ. ಇದರ ಪ್ರತೀಕವಾಗಿ ಶಿವನ ವೇಷಧಾರಿಯಾಗಿ ಸಾಸಲು ಗ್ರಾಮದ ಜಂಗಮ ಅರ್ಚಕ ಸಮೂಹದ ಬಾಲಕನನ್ನು ಮೆರವಣಿಗೆ ಮಾಡಲಾಗುತ್ತದೆ.