ಕಿಕ್ಕೇರಿ ಹೋಬಳಿಯ ಸಾಸಲು ಕ್ಷೇತ್ರದಲ್ಲಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಂ.ವಿ.ರೂಪಾ, ಉಪತಹಸೀಲ್ದಾರ್ ಲಕ್ಷ್ಮೀಕಾಂತ್, ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಮ ಲೆಕ್ಕಿಗ ಪ್ರಸನ್ನ ಇತರರು ಇದ್ದರು. 
ಜಿಲ್ಲೆ

ಸಾಸಲು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಗಮನ

ಕಿಕ್ಕೇರಿ: ಸಾಸಲು ಕ್ಷೇತ್ರ ಹಲವು ಪವಾಡ, ಶಕ್ತಿ ಮಹಿಮೆಯ ಆಗರವಾಗಿದೆ ಎಂದು ತಹಸೀಲ್ದಾರ್ ಎಂ.ವಿ.ರೂಪಾ ತಿಳಿಸಿದರು.

ಹೋಬಳಿಯ ಸಾಸಲು ಕ್ಷೇತ್ರದಲ್ಲಿರುವ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು, ಅಭಿವೃದ್ಧಿಗೆ ವಿಶೇಷ ಗಮನಹರಿಸಲಾಗಿದೆ. ಭಕ್ತರಿಗೆ ಮೂಲಭೂತ ಸೌಲಭ್ಯ, ನೂತನ ರಥ ನಿರ್ಮಾಣಕ್ಕೆ ಮುಂದಾಗಿದ್ದು, ಗ್ರಾಮಸ್ಥರು ಕೈಜೋಡಿಸಬೇಕು. ಕ್ಷೇತ್ರದ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿಯಾಗಲಿದೆ. ಲಕ್ಷ ದೀಪೋತ್ಸವದಿಂದ ಮಾನವನಲ್ಲಿನ ನಕರಾತ್ಮಕ ಶಕ್ತಿ ದೂರವಾಗಲಿದೆ. ಜ್ಯೋತಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸುವ ದಾರಿದೀಪವಾಗಿದೆ. ಕಾರ್ತಿಕ ಮಾಸದಲ್ಲಿ ಸಹಸ್ರಾರು ಭಕ್ತರು ದೇಗುಲ ದರ್ಶನಕ್ಕೆ ಆಗಮಿಸುವುದು ಪವಾಡವಾಗಿದೆ ಎಂದರು.

ದೀಪೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಸಂಭ್ರಮದಿಂದ ಭಾಗವಹಿಸಿದ್ದರು. ಮನೆಗಳಿಂದ ಎಣ್ಣೆ, ದೀಪ, ಬತ್ತಿಯನ್ನು ತಂದು ಸೋಮೇಶ್ವರ, ಶಂಭುಲಿಂಗೇಶ್ವರಸ್ವಾಮಿ ನೆನೆಯುತ್ತ ಹಣತೆ ಹಚ್ಚಿದರು. ಉಪತಹಸೀಲ್ದಾರ್ ಲಕ್ಷ್ಮೀಕಾಂತ್, ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಮಲೆಕ್ಕಿಗ ಪ್ರಸನ್ನ, ಹೇಮಾವರಿ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ನಿದೇರ್ಶಕ ಬಿ.ಎಸ್.ಮಂಜುನಾಥ್, ಕರವೇ ಜಿಲ್ಲಾ ಉಪಾಧ್ಯಕ್ಷ ಗುರುಮೂರ್ತಿ, ಅರ್ಚಕ ವೃಂದದವರು, ಗ್ರಾಮದ ಮುಖಂಡರು ಇದ್ದರು.