ಗೋಣಿಕೊಪ್ಪ: ವಿಜಯದಶಮಿಯಂದು ನಾಡಹಬ್ಬ ದಸರಾ ಸಮಿತಿ ಆಯೋಜಿಸಿದ್ದ ಸ್ತಬ್ಧಚಿತ್ರಗಳು ಸಾವಿರಾರು ಸಂದೇಶ ಸಾರಿದವು.
ವಾಹನಗಳಲ್ಲಿ ನಾನಾ ಕಲಾಕೃತಿಗಳು, ಕಲಾವಿದರ ಕೈಚಳಕ, ಕಿರಿಯರಿಂದ ಹಿಡಿದು ಹಿರಿಯರ ಸಮಾಗಮ ಕಂಡುಬಂತು. ವಿವಿಧ ಇಲಾಖೆಗಳು ಸರ್ಕಾರದ ಯೋಜನೆಗಳ ಮಾಹಿತಿ, ಜಾಗೃತಿ, ಪೂರಕ ಚಿತ್ರಣ ಅನಾವರಣಗೊಳಿಸಿದವು. ಸ್ಪರ್ಧೆಯಲ್ಲಿ 9 ಚಿತ್ರಗಳು ಭಾಗವಹಿಸಿ ಗಮನ ಸೆಳೆದವು.
ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ಹೊರಟ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಸಾಂಪ್ರದಾಯಿಕ ಕೊಡವ ವಾಲಗ ನೃತ್ಯ, ಆದಿವಾಸಿ ನೃತ್ಯ, ಕುಡಿಯ ಜನಾಂಗದ ನೃತ್ಯ ಪಾಲ್ಗೊಂಡಿದ್ದವು. ಮುಖ್ಯರಸ್ತೆಯಲ್ಲಿ ಸಾಗಿ ಬಂದ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಕಲಾಭಿಮಾನಿಗಳು ಕಾದು ಕುಳಿತ್ತಿದ್ದರು.
ಮೆರವಣಿಗೆಯನ್ನು ಶಾಸಕ ಕೆ. ಜಿ. ಬೋಪಯ್ಯ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ, ನಾಡಹಬ್ಬ ದಸರಾ ಸಮಿತಿ ಅಧ್ಯಕ್ಷ ಕಂಜಿತಂಡ ಪ್ರವೀಣ್, ಕಾವೇರಿ ದಸರಾ ಸಮಿತಿ ಅಧ್ಯಕ್ಷ ಬಿ. ಎನ್.ಪ್ರಕಾಶ್ ಇದ್ದರು.
ವಿಜೇತ ಚಿತ್ರಗಳು: ಗೋಣಿಕೊಪ್ಪ ಭಗತ್ ಸಿಂಗ್ ಯುವಕ ಸಂಘದ ಕರೊನಾ-ಮತ್ತು ಸಮುದ್ರ ಮಂಥನ ಪ್ರಥಮ ಸ್ಥಾನ ಗೆದ್ದುಕೊಂಡಿತು. ಹಿಂದೆ ದೇವಾನುದೇವತೆಗಳು ರಾಕ್ಷಸರಿಂದ ಸಮುದ್ರ ಮಂಥನ ಮೂಲಕ ಅಮರರಾಗಲು ನಡೆಸಿದ ಹೋರಾಟ, ಈಗಿನ ಯುಗದಲ್ಲಿ ಕರೊನಾದಿಂದ ಲಕ್ಷಾಂತರ ಜನರಿಗಾದ ನಷ್ಟ ಹಾಗೂ ಜೀವನ ನಡೆಸಲು ಉಂಟಾದ ಕಷ್ಟ ಪರಿಹಾರಕ್ಕೆ ಮಾನವ ಸಂಕುಲ ನಡೆಸುತ್ತಿರುವ ಹೋರಾಟವನ್ನು ಬಿಂಬಿಸಿ ದೇವರು ಹಾಗೂ ಮಾನವರೂ ಕಷ್ಟ ಎದುರಿಸುತ್ತಿದ್ದಾರೆ ಎಂಬ ಅರ್ಥವನ್ನು ಸಾರಿದರು.
ತಿತಿಮತಿ ಶ್ರೀರಾಮಮಂದಿರ ಸಂಘದವರು ರೂಪಿಸಿದ್ದ ಸಾವರ್ಕರ್ ಅಂಡಮಾನ್‌ನಲ್ಲಿ ಜೈಲಿನಲ್ಲಿದ್ದ ಸಂದರ್ಭದ ಚಿತ್ರ ದ್ವಿತೀಯ ಸ್ಥಾನ ಪಡೆದುಕೊಂಡಿತು. ಜೈಲುವಾಸ ಸಂದರ್ಭ ಕೈದಿಗಳಿಗೆ ಶಿಕ್ಷಣ ನೀಡದ ಪ್ರಸಂಗವನ್ನು ನೆನಪಿಸಲಾಯಿತು. ಜೈಲಿನ ಕಲಾಕೃತಿ ಮೂಲಕ ಜೈಲು ವಾಸದ ಚಿತ್ರಣ ಪ್ರಸ್ತುತಪಡಿಸಿದರು.
ಸರ್ವಂ ಸಮಿತಿಯು ರಾಷ್ಟ್ರಪತಿ ದ್ರೌಪದಿ ಮರ್ಮು ಜೀವನ ಹಾದಿಯನ್ನು ನೆನಪಿಸುವ ಮೂಲಕ ಗೌರವ ಸೂಚಿಸಿದರು. ಇದು ತೃತೀಯ ಬಹುಮಾನಕ್ಕೆ ಭಾಜನವಾಯಿತು. ಅವರ ಆಯ್ಕೆ ಮೂಲಕ ಸಂವಿಧಾನದ ಶಕ್ತಿ ಪ್ರದರ್ಶನವಾಗಿದೆ. ಉನ್ನತ ಹುದ್ದೆ ಅಲಂಕರಿಸಿರುವ ಗಿರಿಜನರು ಜನಾಂಗದ ಪ್ರತಿಭೆಗಳಿಗೆ ಸಹಾಯ ಹಸ್ತ ನೀಡಬೇಕು ಎಂಬ ಸಂದೇಶದೊಂದಿಗೆ ಬೃಹತ್ ಇಂಡಿಯ ಗೇಟ್ ಕಲಾಕೃತಿ ನೋಡುಗರ ಗಮನ ಸೆಳೆಯುವಂತೆ ಮಾಡಿದರು.
ಮತ್ತಷ್ಟು ಚಿತ್ರಗಳು: ದೇವರಪುರದ ಭಗತ್ ಸಿಂಗ್ ಯುವಕ ಸಂಘವು ಅಯೋಧ್ಯಾ ಶ್ರೀ ರಾಮಮಂದಿರದ ಚಿತ್ರಣ ಅನಾವರಣಗೊಳಿಸಿತು. ಜನ್ಮಭೂಮಿ ಮುಕ್ತಿ ಆಂದೋಲನ ಯಶಸ್ಸಿನ ಹೆಜ್ಜೆಗಳನ್ನು ಸ್ತಬ್ಧಚಿತ್ರದ ಮೂಲಕ ಪ್ರಸ್ತುತಪಡಿಸಿದರು. ರಾಮಮಂದಿರದ ಮಾದರಿಯನ್ನು ಕಾರ್ಡ್‌ಬೋರ್ಡ್ ರಚಿಸಿ ಗಮನ ಸೆಳೆಯಿತು.
ಸಂಜೀವಿನಿ ಕಟ್ಟಡ ಕಾರ್ಮಿಕರ ಸಂಘ ಹಾಗೂ ಅರುವತೋಕ್ಲು ಶಾರದಾಂಬ ದಸರಾ ಸಮಿತಿ ನಮ್ಮ ಮಕ್ಕಳೇ ನಮ್ಮ ಆಸ್ತಿ ಸಂದೇಶ ಸಾರಿದರು. ಗಾಂಜಾ, ಬ್ರೌನ್‌ಶುಗರ್, ಮದ್ಯಪಾನಕ್ಕೆ ಯುವಜನತೆ ಬಲಿಯಾಗುತ್ತಿರುವುದನ್ನು ತಪ್ಪಿಸಲು ಪಾಲಕರ ಹೊಣೆಗಾರಿಕೆ ಬಗ್ಗೆ ಅರಿವಿನೊಂದಿಗೆ ಯೋಗ ಹಾಗೂ ಧ್ಯಾನಕ್ಕೆ ಸಮಯ ಕೊಡಿ ಎಂಬ ಸಂದೇಶ ಸಾರಿತು.
ಪರಿಸರ ಪ್ರೇಮಿ ಕೈಕೇರಿ ಸಂಘದವರು ಪರಿಸರ ರಕ್ಷಣೆ ಮೂಲಕ ಜೀವಿಗಳ ರಕ್ಷಣೆ ಸಾಧ್ಯವಿದೆ ಹಾಗೂ ಪರಿಸರ ಮಾಲಿನ್ಯವು ವಿಶ್ವನಾಶಕ್ಕೆ ಮೂಲ ಸಂದೇಶಗಳನ್ನು ನೀಡಿದರು. ಹಸಿ ಕಸ ಹಾಗೂ ಒಣ ಕಸ ವಿಂಗಡಣೆಯಿಂದ ಸ್ವಚ್ಛತೆ ಕಾಪಾಡಲು ಸಾಧ್ಯವಿದೆ. ವಾಹನದಲ್ಲಿ ಬಂದು ಎಲ್ಲೆಂದರಲ್ಲಿ ಬಿಸಾಡದೆ ಕಸವನ್ನು ಸ್ಥಳೀಯ ಆಡಳಿತ ನಿರ್ಮಿಸಿರುವ ಕಸದ ಬುಟ್ಟಿಗೆ ಹಾಕಬೇಕು ಎಂದು ಜಾಗೃತಿ ಮೂಡಿಸಿದರು.
ಪೊನ್ನಂಪೇಟೆ ಜೆ.ಬಿ.ಪುರುಷರ ಸ್ವಸಹಾಯ ಸಂಘ ವಾಣಿಜ್ಯ ಉದ್ದೇಶಕ್ಕೆ ಮರಗಳ ನಾಶದಿಂದಾಗುವ ದುಷ್ಪರಿಣಾಮಗಳು ಹಾಗೂ ಕಳೆನಾಶಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ಕಡೆಮೆಯಾಗಲಿದೆ ಎಂಬ ಸಂದೇಶ ನೀಡಿದರು.
ಅರುವತೋಕ್ಲು ಕಾಡ್ಲಯ್ಯಪ್ಪ ದಸರಾ ಸಮಿತಿ ಗೋಸಂಪತ್ತಿನ ಪ್ರಾಮುಖ್ಯತೆಯನ್ನು ತಿಳಿಸಿದರು. ಗೋಸಂಪತ್ತಿನ ಉಪಯೋಗಗಳನ್ನು ಕಲಾಕೃತಿಗಳ ಮೂಲಕ ಮೂಕ ಸಂದೇಶ ಎಂಬ ವಿಷಯವನ್ನು ಪ್ರಸ್ತುತಪಡಿಸಿದರು. ಗೋವು ಬದುಕಿದ್ದಾಗ ಮತ್ತು ಸಾವಿಗೀಡಾದ ನಂತರವೂ ಪ್ರಯೋಜನಕಾರಿ ಎಂದು ತಿಳಿಸಿದರು.
ಚಿತ್ರಗಳೊಂದಿಗೆ ಯೋಜನೆ ಮಾಹಿತಿ: ವಿವಿಧ ಇಲಾಖೆಗಳು ಸಾರ್ವಜನಿಕರಿಗೆ ಸರ್ಕಾರದ ಸವಲತ್ತು, ಅವಕಾಶ, ಆರೋಗ್ಯ ರಕ್ಷಣೆ, ಸ್ವಚ್ಛತೆಯ ಮಾಹಿತಿ ಹಂಚಿಕೊಂಡು ಗಮನ ಸೆಳೆದವು. ವಾಹನಗಳಲ್ಲಿ ಕಣ್ಮನ ಸೆಳೆಯುವಂತೆ ಚಿತ್ರಿಸಿ, ಸಂದೇಶ ನೀಡಲಾಯಿತು.
ಸ್ವಚ್ಛಭಾರತ್ ಮಿಷನ್ ಮೂಲಕ ಶೌಚಗುಂಡಿ ನಿರ್ವಹಣೆ, ಶೌಚಗೃಹ ನಿರ್ಮಾಣದ ಮಾಹಿತಿ, ಏಕರೀತಿಯ ಪ್ಲಾಸ್ಟಿಕ್ ಬಳಕೆ, ದ್ರವ್ಯ ತ್ಯಾಜ್ಯ, ದ್ರವ, ಬೂದು ನೀರು, ಗಲೀಜು ನೀರು ನಿರ್ವಹಣೆ ಬಗ್ಗೆ ಬೆಳಕು ಚೆಲ್ಲಿತು. ಕಸ ವಿಂಗಡಣೆಯೊಂದಿಗೆ ಹಸಿ ಕಸವನ್ನು ಮನೆಯಂಗಳದಲ್ಲಿ ಗೊಬ್ಬರವಾಗಿ ಪರಿವರ್ತಿಸಲು ಇರುವ ಅವಕಾಶ, ಬಕೆಟ್, ಪೈಪ್, ನೆಟ್ ಫ್ರೇಮ್ ಮೂಲಕ ಕಸವನ್ನು ಸಂಗ್ರಹಿಸಲು ಮಾಹಿತಿ ನೀಡಿ ಗಮನ ಸೆಳೆದವು.
ಉದ್ಯೋಗಖಾತ್ರಿ ಯೋಜನೆಯಲ್ಲಿ ಎಲ್ಲರಿಗೂ ದನದ ಕೊಟ್ಟಿಗೆ ಕಟ್ಟುವ ಯೋಜನೆ, ವೈಯಕ್ತಿಕ ಯೋಜನೆ, ಕೂಲಿ ಹಣ 309 ರೂ.ಗಳಿಗೆ ಏರಿಸಿರುವ ಸರ್ಕಾರದ ಯೋಜನೆಯನ್ನು ತಿಳಿಸಲಾಯಿತು.
ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಪರಿಚಯ, ಗ್ರಾಮಗಳಲ್ಲಿ ದೊರೆಯುವ ವೈದ್ಯಕೀಯ ಸೌಲಭ್ಯದ ಮಾಹಿತಿ, 15 ರೀತಿಯ ಸೇವೆ, ರಕ್ತಪರೀಕ್ಷೆಗೆ ಇರುವ ಅವಕಾಶಗಳ ಜಾಗೃತಿ ಮೂಡಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳೆ, ಮಕ್ಕಳ ರಕ್ಷಣೆ, ಆರೋಗ್ಯ, ಪೌಷ್ಟಿಕ ಆಹಾರ, ಬಾಲ್ಯ ವಿವಾಹದ ದುಷ್ಪರಿಣಾಮ, ಗರ್ಭಿಣಿ, ಬಾಣಂತಿಯರ ಆರೋಗ್ಯ ರಕ್ಷಣೆ ಕುರಿತು ಬೆಳಕು ಚೆಲ್ಲಿದವು. ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಬೆಳೆಸಿ ಎಂಬ ಸಂದೇಶವನ್ನು ಕೃಷಿ ಇಲಾಖೆ ಪ್ರಸ್ತುತಪಡಿಸಿತು.