ಜಿಲ್ಲೆ

ಸಾವಿರ ಮದ್ಯದಂಗಡಿಗಳ ಪ್ರಸ್ತಾವನೆ  -ರಾಷ್ಟ್ರಪಿತನ ಪುತ್ಥಳಿ ಎದುರು ನಾರಿಯರ ಗಾಂಧಿಗಿರಿ - ಅಹೋರಾತ್ರಿ ಸತ್ಯಾಗ್ರಹ

ದಾವಣಗೆರೆ: ರಾಜ್ಯದಲ್ಲಿ 1 ಸಾವಿರ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಅಬಕಾರಿ ಇಲಾಖೆಯ ಪ್ರಸ್ತಾವನೆ ವಿರೋಧಿಸಿ ಗ್ರಾಮೀಣ ಕೂಲಿಕಾರ್ಮಿಕರ ಸಂಘದ ಜಿಲ್ಲಾ ಘಟಕದಡಿ ಮಹಿಳೆಯರು ಗಾಂಧಿ ಭವನದ ಬಳಿ ಭಾನುವಾರ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಜಗಳೂರು ತಾಲೂಕಿನ ತಾರೆಹಳ್ಳಿ, ಮರಿಕುಂಟೆ, ಪಲ್ಲಾಗಟ್ಟೆ, ಮಹದೇನಹಳ್ಳಿ, ಮುಗ್ಗಿದ ರಾಗಿಹಳ್ಳಿ, ದಾವಣಗೆರೆ ತಾಲೂಕಿನ ಕಿತ್ತೂರು ಸೇರಿ ವಿವಿಧ ಗ್ರಾಮದ ಮಹಿಳೆಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬೇಡವೇ ಬೇಡ ಸಾರಾಯಿ ಬೇಡ, ಹೆಂಡ-ಸಾರಾಯಿ ಸಹವಾಸ ಹೆಂಡತಿ ಮಕ್ಕಳ ಉಪವಾಸ, ಬೀರು ಬೇಡ, ನೀರು ಬೇಕು.. ಇತ್ಯಾದಿ ಘೋಷಣೆ ಹಾಕಿದರು.

ಯಾವುದೇ ಸರ್ಕಾರ ಮದ್ಯ ಮಾರಾಟದಿಂದ ಬರುವ ಆದಾಯವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವುದು ಅಪರಾಧ ಎಂದು ಗಾಂಧೀಜಿ ಹೇಳಿದ್ದರು. ಸರ್ಕಾರಗಳು ನಿಧಾನವಾಗಿ ಮದ್ಯ ನಿಷೇಧದತ್ತ ಸಾಗಬೇಕೆಂಬುದು ಸಂವಿಧಾನದ ಆಶವೂ ಆಗಿದೆ.

ಮಹಾತ್ಮ ಗಾಂಧೀಜಿ ಜಯಂತ್ಯುತ್ಸವದ ಭಾಗವಾಗಿ ಸರ್ಕಾರ ಅಕ್ರಮ ಮದ್ಯ ಮಾರಾಟ ತಡೆಗಟ್ಟುವ ಬದಲಾಗಿ ಹೊಸ ಮದ್ಯದಂಗಡಿಗಳ ಆರಂಭಕ್ಕೆ ಪ್ರಸ್ತಾವನೆ ಮಾಡಿರುವ ಕ್ರಮ ಆಘಾಕಾರಿಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಬಾರ್‌ಗಳು ಮಹಿಳೆಯರು ಅಲ್ಲದೆ ಸಮಾಜದ ನೆಮ್ಮದಿ, ಆರೋಗ್ಯವನ್ನು ಹದಗೆಡಿಸಲಿದೆ. ಹೀಗಾಗಿ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ಹಾಗೂ ಗ್ರಾಮ ಪಂಚಾಯಿತಿಗಳು ಹಾಗೂ ನಗರಗಳ ಸೂಪರ್ ಮಾರುಕಟ್ಟೆಗಳು ಮತ್ತು ಆನ್‌ಲೈನ್ ಮಾರಾಟದ ಪ್ರಸ್ತಾವನೆ ಕೈಬಿಟ್ಟು ಗಾಂಧಿ ಆಶಯಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

2020ರ ಡಿ.1ರ ಹೈಕೋರ್ಟ್ ಆದೇಶದಂತೆ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಮಾರಾಟಗಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಪಂಚಾಯತ್‌ರಾಜ್ ಕಾನೂನಿನನ್ವಯ ಗ್ರಾಮಸಭೆಗೆ ಪರಮಾಧಿಕಾರ ನೀಡುವ ಆದೇಶ ಹೊರಡಿಸಬೇಕು.

ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಂತೆ ಶೇ. 10ರಷ್ಟು ಮಹಿಳೆಯರು ಆಯಾ ಪಂಚಾಯ್ತಿಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಿಗೆ ನೀಡದಿರಲು ಗ್ರಾಮಸಭೆಯಲ್ಲಿ ನಿರ್ಧರಿಸಿದಲ್ಲಿ ಆ ಠರಾವನ್ನು ಸರ್ಕಾರ ಎತ್ತಿಹಿಡಿಯಬೇಕು ಎಂದು ಒತ್ತಾಯಿಸಿದರು.

ರಾತ್ರಿ ಧರಣಿ ಮುಂದುವರಿಸಿ, ಮಹಾತ್ಮ ಗಾಂಧೀಜಿ ಜಯಂತಿಯಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂಘಟನೆ ಜಿಲ್ಲಾಧ್ಯಕ್ಷೆ ಎ.ಶ್ರುತಿ ತಿಳಿಸಿದರು.

ಪ್ರತಿಭಟನೆಯಲ್ಲಿ ಜಗಳೂರು ತಾಲೂಕು ಸಂಯೋಜಕಿ ಟಿ.ಎಸ್.ಸುಧಾ, ಕೆ.ವಸಂತಾ, ನಾಗರತ್ನಮ್ಮ, ಗೀತಾ, ರೇಣುಕಮ್ಮ, ವಿಶಾಲಾಕ್ಷಿ ಇತರರಿದ್ದರು.

---