ಜಿಲ್ಲೆ

ಸಾವಿರ ಮದ್ಯದ ಅಂಗಡಿ ತೆರೆಯುವ ಸರ್ಕಾರದ ಪ್ರಸ್ತಾವನೆ ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ಪ್ರತಿಭಟನೆ

ಮೈಸೂರು: ರಾಜ್ಯದಲ್ಲಿ ಹೊಸದಾಗಿ ಸಾವಿರ ಮದ್ಯದ ಅಂಗಡಿ ತೆರೆಯಲು ಪರವಾನಗಿ ನೀಡುವ ಸರ್ಕಾರದ ಪ್ರಸ್ತಾವನೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಜಿಲ್ಲಾ ಸಮಿತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಗಾಂಧಿ ವೃತ್ತದಲ್ಲಿ ಧರಣಿ ನಡೆಸಿದ ಸಮಿತಿ ಸದಸ್ಯರು, ಮದ್ಯ ಮಾರಾಟದಿಂದ ಈಗಾಗಲೇ ಜನರು ತೊಂದರೆಗೀಡಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತೆ ಒಂದು ಸಾವಿರ ಮದ್ಯದ ಅಂಗಡಿಗಳಿಗೆ ಲೈಸೆನ್ಸ್ ನೀಡುವ ಪ್ರಸ್ತಾವನೆ ಮಾಡಿರುವುದು ಖಂಡನೀಯ ಎಂದು ಘೋಷಣೆ ಕೂಗಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ನಗರಗಳ ಸೂಪರ್ ಮಾರುಕಟ್ಟೆಗಳಲ್ಲಿ ಹೊಸ ಮತ್ತು ಬಳಕೆ ಇಲ್ಲದ ಪರವಾನಗಿಗಳಿಗೆ ಮರುಜೀವ ನೀಡುವಂತೆ ಅಬಕಾರಿ ಇಲಾಖೆ ಪ್ರಸ್ತಾವನೆ ನೀಡಿದೆ. 600ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳು ಇಲ್ಲದಿರುವುದನ್ನು ಗುರುತಿಸಿ, 3000 ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಮದ್ಯದ ಅಂಗಡಿಗಳಿಗೆ ಅನುಮತಿ ನೀಡಲು ಸಜ್ಜಾಗಿದೆ ಎಂದು ದೂರಿದರು.
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿಯೂ ಮದ್ಯದ ಅಂಗಡಿಗಳನ್ನು ತೆರೆಯುವ ಉದ್ದೇಶ ಮುಂದಿಟ್ಟಿರುವುದು ನ್ಯಾಯಾಲಯದ ಆದೇಶ ಉಲ್ಲಂಘಿಸಿದಂತಾಗುತ್ತದೆ. ಒಂದೆಡೆ ಬೆಲೆ ಏರಿಕೆ, ಬಡತನ, ನಿರುದ್ಯೋಗದಿಂದ ಜೀವನ ತತ್ತರಿಸುತ್ತಿದರೆ, ಇನ್ನೊಂದೆಡೆ ನೈತಿಕ ಮೌಲ್ಯ ಕುಸಿಯುತ್ತಿದೆ. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕೆ, ಕುಟುಂಬ ಕಲಹಗಳಿಗೆ, ಸಮಾಜಘಾತುಕ ಕೃತ್ಯಗಳಿಗೆ ಮದ್ಯಪಾನ ಎಡೆ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ವರಮಾನ ಹೆಚ್ಚಿಸಿಕೊಳ್ಳಲು ಬಾರ್‌ಗಳಿಗೆ ಅನುಮತಿ ನೀಡುವ ಮೂಲಕ ಜನರನ್ನು ಇನ್ನಷ್ಟು ನೈತಿಕ ಅಧಃಪತನಕ್ಕೆ ತಳ್ಳಲ್ಪಡುವ ಈ ಮಾರ್ಗ ಹಿಡಿದಿರುವುದನ್ನು ಮಹಿಳಾ ಸಮುದಾಯ ನೋವಿನಿಂದ ಪ್ರಶ್ನಿಸುತ್ತದೆ. ಜನರ ಆರ್ಥಿಕ ಸಬಲೀಕರಣಕ್ಕೆ ಕೆಲವು ಗ್ಯಾರಂಟಿಗಳನ್ನು ಘೋಷಿಸಿರುವ ಸರ್ಕಾರ, ಮತ್ತೊಂದೆಡೆ ಸಾಮಾಜದ ಸ್ವಾಸ್ಥ್ಯ ಕದಡುವ ಕೆಲಸಕ್ಕೆ ಮುಂದಾಗಿದೆ. ಆದ್ದರಿಂದ ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘಟನೆಯ ಜಿಲ್ಲಾಧ್ಯಕ್ಷೆ ನಳಿನಾ, ಕಾರ್ಯದರ್ಶಿ ಸೀಮಾ, ಜಂಟಿ ಕಾರ್ಯದರ್ಶಿಗಳಾದ ಅಭಿಲಾಷ, ಪುಷ್ಪಾ, ಗಾಯತ್ರಿ, ಆಸಿಯಾ ಬೇಗಂ ಇದ್ದರು.