ಬಾಗಲಕೋಟೆ: ಪ್ರಸಕ್ತ ಸಾಲಿನಲ್ಲಿ ೯೬ ಹೊಸ ಕಾಮಗಾರಿಗಳಿಗೆ ಅನುಮೋದನೆ, ನಡುಗಡ್ಡೆಯಾಗುವ ಪ್ರದೇಶಗಳ ಸ್ವಾಧೀನಕ್ಕೆ ೧೧೩.೯೮ ಕೋಟಿ ಅಂಂದಾಜು ಯೋಜನೆ ರೂಪಿಸಲಾಗಿದೆ ಹಾಗೂ ಯೂನಿಟ್-೩ ಸಮಗ್ರ ಅಭಿವೃದ್ಧಿಗಾಗಿ ೨೨೧೧.೨೦ ಕೋಟಿ ರೂ. ಟೆಂಡರ್ ಕರೆಯಲಾಗಿದೆ ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿಟಿಡಿಎ ಸಭಾಭವನದಲ್ಲಿ ಬುಧವಾರ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು, ಪ್ರಸಕ್ತ ೨೦೨೨-೨೩ ನೇ ಸಾಲಿನಲ್ಲಿ ೪೫೨.೫೦ ಕೋಟಿ ರೂ.ಗಳ ವೆಚ್ಚದಲ್ಲಿ ೯೬ ಹೊಸ ಕಾಮಗಾರಿಗಳಿಗೆ ಸರ್ಕಾರ ಅನುಮೋದನೆ ನೀಡಿದೆ, ಯೂನಿಟ್-೩ ರಲ್ಲಿ ವಿವಿಧ ಕಾಮಗಾರಿಗಳ ಅಭಿವೃದ್ಧಿಗಾಗಿ ೨೨೧೧.೨೦ ಕೋಟಿ ರೂ. ಟೆಂಡರ್ ಕರೆಯಲಾಗಿದೆ ಹಾಗೂ ಆಲಮಟ್ಟಿ ಜಲಾಶಯದಲ್ಲಿ ೫೨೪.೨೫೬ ಮೀ. ನೀರು ಸಂಗ್ರಹವಾದಾಗ ನಡುಗಡ್ಡೆಯಾಗುವ ನಗರದ ೧, ೨, ೩, ೬ ಹಾಗೂ ೭ ವಾರ್ಡ್ ಗಳ ೧೦೫೭ ಕಟ್ಟಡಗಳ ಆಸ್ತಿಗಳ ಸ್ವಾಧೀನಕ್ಕೆ ೧೧೩.೯೮ ಕೋಟಿ ರೂ. ಅಂದಾಜು ಯೋಜನೆ ರೂಪಿಸಲಾಗಿದೆ ಎಂದರು.
ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ಸರ್ಕಾರ ಬಿಟಿಡಿಎ ವಿಭಾಗ ನಂ. ೧ ರಲ್ಲಿ ೪೪ ಕಾಮಗಾರಿ, ವಿಭಾಗ ನಂ. ೨ ರಲ್ಲಿ ೪೩ ಸೇರಿ ಒಟ್ಟು ೮೭ ಕಾಮಗಾರಿಗಳನ್ನು ಬಿಟಿಡಿಎ ಮೂಲಕ ಹಾಗೂ ೯ ಕಾಮಗಾರಿಗಳು ಆಲಮಟ್ಟಿ ಅರಣ್ಯ ವಿಭಾಗದಿಂದ ಒಟ್ಟು ೪೫೨.೫೦ ಕೋಟಿ ವೆಚ್ಚದಲ್ಲಿ ೯೬ ಹೊಸ ಕಾಮಗಾರಿಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ೯೬ ಕಾಮಗಾರಿಗಳ ಪೈಕಿ ಈಗಾಗಲೇ ೬೮ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಇನ್ನೂ ೨೮ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ಯೂನಿಟ್-೩ ರಲ್ಲಿ ಐದು ಪ್ಯಾಕೇಜ್ ಅಡಿ ೧೬೦೦ ಎಕರೆ ಜಮೀನಿನದಲ್ಲಿ ಜಿ.ಎಸ್.ಟಿ. ಹೊರತುಪಡಿಸಿ ೨೨೧೧.೨೦ ಕೋಟಿ ರೂ.ಗಳ ವೆಚ್ಚದಲ್ಲಿ ಆಂತರಿಕ, ಮುಖ್ಯ ರಸ್ತೆ, ಒಳಚರಂಡಿ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯ ನೀಡಿ ಲೇಔಟ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಬಿಟಿಡಿಎ ಸದಸ್ಯರಾದ ಕುಮಾರ ಯಳ್ಳಿಗುತ್ತಿ, ಶಿವಾನಂದ ಟವಳಿ, ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಿಟಿಡಿಎ ಪುನರ್ ವಸತಿ ಅಽಕಾರಿ ಗುರುಸಿದ್ದಯ್ಯ ಹಿರೇಮಠ, ಮಾಜಿ ಅಧ್ಯಕ್ಷ ಜಿ.ಎನ್. ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.