ಕೊಪ್ಪ ತಾಲೂಕಿನ ಮೇಗೂರು ಗ್ರಾಮದ ಕಡುಗುಂಡಿ ಕೃಷ್ಣ ಅವರ ಮನೆ ಮೇಲೆ ಮರ ಬಿದ್ದು ಛಾವಣಿಗೆ ಹಾನಿಯಾಗಿದೆ.  
ಜಿಲ್ಲೆ

ಸಾವಿರ ಕಂಬಗಳು ನಾಶ

ಜಯಪುರ: ಮೇಗುಂದ ಹೋಬಳಿಯಾದ್ಯಂತ ನಾಲ್ಕೈದು ದಿನಗಳಿಂದ ಭಾರಿ ಗಾಳಿ, ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಗಾಳಿ, ಮಳೆಗೆ ಹಲವೆಡೆ ಮರಗಳು ವಿದ್ಯುತ್ ತಂತಿ ಹಾಗೂ ಮನೆಗಳ ಬಿದ್ದು 1000ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅದರಿಂದಾಗಿ ಹೋಬಳಿ ಬಹುತೇಕ ಕಡೆಗಳಲ್ಲಿ ಎರಡು ದಿನಗಳಿಂದ ವಿದ್ಯುತ್ ಇಲ್ಲದಂತಾಗಿದೆ.

ಮುರಿದ ವಿದ್ಯುತ್ ಕಂಬಗಳನ್ನು ಮೆಸ್ಕಾಂ ಸಿಬ್ಬಂದಿ ಸರಿಪಡಿಸುತ್ತಿದ್ದು, ಮರಗಳು ಪದೇ ಪದೆ ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿರುವುದರಿಂದ ವಿದ್ಯುತ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಅಡಕೆ ಮರಗಳು ಬಿದ್ದಿದ್ದು, ಕಾಳುಮೆಣಸು, ಕಾಫಿ ಬೆಳೆಗಳು ಮಳೆಯಿಂದಾಗಿ ನೆಲಕಚ್ಚಿವೆ.

ಹಲವೆಡೆ ರಸ್ತೆಗಳ ಮೇಲೆ ಮರಗಳು ಬಿದ್ದಿದ್ದು, ಜಯಪುರ-ಗುಡ್ಡೇತೋಟ-ಬಸರೀಕಟ್ಟೆ-ಹೊರನಾಡು ರಸ್ತೆಯ ಹಲವೆಡೆ ಮರ ಬಿದ್ದಿವೆ. ತೀರ್ಥಕೆರೆ ಬಳಿ ಬೃಹತ್ ಮರ ಬಿದ್ದಿದ್ದು ಬಸ್ ಸೇರಿದಂತೆ ಬೃಹತ್ ವಾಹನಗಳ ಸಂಚಾರ ಭಾನುವಾರ ಬಂದ್ ಆಗಿತ್ತು. ಗ್ರಾಮೀಣ ಭಾಗದ ಹಲವೆಡೆ ಮರಗಳು ಬಿದ್ದಿದ್ದು, ಧರೆ ಕುಸಿತವಾಗಿದೆ ಹಾಗೂ ರಸ್ತೆಗಳಲ್ಲಿ ಕೊರಕಲು ಬಿದ್ದಿವೆ.

ಮೇಗೂರು ಗ್ರಾಮದ ಕಡುಗುಂಡಿ ಕೃಷ್ಣ ಅವರ ಮನೆ ಮೇಲೆ ಶನಿವಾರ ಮರ ಬಿದ್ದಿದ್ದರಿಂದ ಛಾವಣಿ ಜಖಂಗೊಂಡಿದೆ. ಅಡುಗೆ ಪಾತ್ರೆ, ಹೊಲಿಗೆ ಯಂತ್ರ ಮತ್ತು ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ.