ಹುಬ್ಬಳ್ಳಿ: ಮಿದುಳು ನಿಷ್ಕ್ರಿಯಗೊಂಡಿದ್ದ ಕೊಪ್ಪಳ ಜಿಲ್ಲೆ ಮುನಿರಾಬಾದ್ನ 22 ವಯಸ್ಸಿನ ಬಸವರಾಜ ಭಜಂತ್ರಿ ಎಂಬುವವರು ಸಾವಿನಲ್ಲೂ ಸಾರ್ಥಕ್ಯ ಮೆರೆದಿದ್ದಾರೆ. ಕಿಡ್ನಿ, ಲಿವರ್ ಅನ್ನು ನಗರದ ಸುಚಿರಾಯು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದಿದ್ದು, ಹುಬ್ಬಳ್ಳಿಯ ಮಹಿಳೆಯೊಬ್ಬರಿಗೆ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
ರಸ್ತೆ ಅಪಘಾತದಲ್ಲಿ ಗಂಭೀರ ಪೆಟ್ಟಾಗಿದ್ದ ಬಸವರಾಜ ಅವರನ್ನು ನಗರದ ಸುಚಿರಾಯು ಆಸ್ಪತ್ರೆಯಲ್ಲಿ ಗುರುವಾರ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಶುಕ್ರವಾರ ಮಿದುಳು ನಿಷ್ಕ್ರಿಯಗೊಂಡಿದ್ದರಿಂದ ಕುಟುಂಬದವರ ಮನವೊಲಿಸಿ ಅಂಗಾಂಗಳನ್ನು ದಾನವಾಗಿ ಪಡೆಯಲಾಯಿತು. ಒಂದು ಕಿಡ್ನಿಯನ್ನು ಸುಚಿರಾಯು ಆಸ್ಪತ್ರೆ, ಮತ್ತೊಂದು ಕಿಡ್ನಿಯನ್ನು ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ನೀಡಲಾಗಿದೆ. ಲಿವರ್ ಅನ್ನು ಬೆಂಗಳೂರಿನ ಎಚ್ಸಿಜಿ ಆಸ್ಪತ್ರೆಗೆ ರವಾನಿಸಲಾಯಿತು. ವಿಮಾನ ನಿಲ್ದಾಣಕ್ಕೆ ಅಂಗಾಂಗಗಳನ್ನು ಸಾಗಿಸಲು ಹು-ಧಾ ಪೊಲೀಸರು ಹಸಿರು ಕಾರಿಡಾರ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ಬ್ರೇನ್ ಸ್ಟೆಮ್ ಡೆತ್ ಕಮಿಟಿ ನೇತೃತ್ವದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಸುಚಿರಾಯು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.