ಅಥಣಿ ಗ್ರಾಮೀಣ: ನಮ್ಮ ದೇಶದ ಸಂಸ್ಕೃತಿ, ಪರಂಪರೆ ಉಳಿಸುವಲ್ಲಿ ಜಾತ್ರೆ, ಉತ್ಸವ ಮುಂಚೂಣಿಯಲಿದ್ದು, ಜನರನ್ನು ಒಂದೂಗೂಡಿಸಿ ಪ್ರೀತಿ- ವಿಶ್ವಾಸ ಮೂಡಿಸುವ ಮೆಟ್ಟಿಲುಗಳಾಗಿ ಕಾರ್ಯರ್ನಿಹಿಸುತ್ತಿವೆ ಎಂದು ಅರ್ಚಕ ಮಲ್ಲಯ್ಯ ಮಠಪತಿ ಹೇಳಿದರು.
ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದಲ್ಲಿ ಚಂದ್ರಯ್ಯ ಅಜ್ಜನವರ ಶಕ್ತಿಪೀಠ ಲೋಕಾರ್ಪಣೆ, ಕಂಚಿನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರೆ ನಿಮಿತ್ತ ಸೋಮವಾರ ಬಬಲಾದಿಯಿಂದ ಆಗಮಿಸಿದ್ದ ಶ್ರೀ ಸದಾಶಿವ ಚಕ್ರವರ್ತಿ ಜ್ಯೋತಿಯನ್ನು ಬರಮಾಡಿಕೊಂಡು ಮಾತನಾಡಿದರು. ನಮ್ಮ ಸಂಸ್ಕೃತಿಯಲ್ಲಿ ಭಾವನೆಗಳ, ಪ್ರೀತಿಯ ಸಾಗರ ತುಂಬಿ ತುಳುಕುತ್ತಿದೆ.
ಮಹಾಮಾರಿ ರೋಗಗಳು ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾಗ ಸದಾಶಿವ ಚಕ್ರವರ್ತಿಗಳ ಹೆಸರಿನಲ್ಲಿ ಸೇವಿಸಿದ ಪ್ರಸಾದ ಅಂಬಲಿ, ದಿವ್ಯ ಔಷಧವಾಗಿ ಗುಣಪಡಿಸಿದೆ. ದೇವರ ಮೇಲೆ ನಂಬಿಕೆ ನಮ್ಮ ದೇಶದಲ್ಲಿ ಮಾತ್ರ ಕಾಣಸಿಗಲು ಸಾಧ್ಯ ಎಂದರು.
ಜಾತ್ರಾ ಕಮಿಟಿ ಅಧ್ಯಕ್ಷ ರಾಜಶೇಖರ ಜಮಖಂಡಿ ಮಾತನಾಡಿ, ಮನುಷ್ಯ ತನಗಾಗಿ ಜೀವಿಸದೆ ಪರೋಪಕಾರ ಮಾಡಬೇಕು. ಹಸು ಕಟ್ಟಿ ಸಾಕಿದರೂ ಹಾಲು ಕೊಡದಿದ್ದರೆ ಅದು ವ್ಯರ್ಥ ಎಂದರು.
ಬಬಲಾದಿಯಿಂದ ಆಗಮಿಸಿದ್ದ ಶ್ರೀ ಸದಾಶಿವ ಚಕ್ರವರ್ತಿ ಜ್ಯೋತಿಯನ್ನು ಸಕಲ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಘಟನಟ್ಟಿ ಶಾಖಾ ಮಠಕ್ಕೆ ಕರೆತರಲಾಯಿತು. ಗ್ರಾಮದ ಜನರು ನೀರು ಹಾಕಿ ದರ್ಶನ ಪಡೆಯುವುದು ವಿಶೇಷವಾಗಿತ್ತು.
ಮುಖಂಡರಾದ ಶ್ರೀಕಾಂತ ಅಥಣಿ, ರಮೇಶ ಚಿಮ್ಮಡ, ನರಸಿಂಗ್ ಮೊಹಿತೆ, ಬಂಡು ಜಗತಾಪ, ಬಸಪ್ಪ ಚಿಮ್ಮಡ, ಕುಮಾರ ಗಲಗಲಿ, ವೊಠೋಬಾ ಕದಮ, ಯಲ್ಲಪ್ಪ ಕಲಾಲ, ಪ್ರಕಾಶ ಮೊಹಿತೆ, ಸದಾಶಿವ ಭೋಸಲೆ, ಜಯಪಾಲ ಪಾಲಬಾವಿ, ನಾರಾಯಣ ಕದಮ, ಶಿವಾನಂದ ಜಂಬಗಿ, ನಿಖೊಲ ಮಾಂಗ, ಸರ್ವೇಶ ಮಠಪತಿ ಇತರರು ಇದ್ದರು.