ಜಿಲ್ಲೆ

ಸಾವಿತ್ರಿಬಾಯಿ ಫುಲೆ ದೇಶ ಕಂಡ ದಿಟ್ಟ ಮಹಿಳೆ

ಚಿತ್ರದುರ್ಗ: ಅಕ್ಷರ ಕ್ರಾಂತಿಯುಂಟು ಮಾಡಿದ ಸಾವಿತ್ರಿಬಾಯಿ ಫುಲೆ ದೇಶ ಕಂಡ ಅಪ್ರತಿಮ ದಿಟ್ಟ ಮಹಿಳೆ ಎಂದು ರಾಜ್ಯ ಮಾದಿಗ ಮಹಾಸಭಾದ ಅಧ್ಯಕ್ಷ ಹನುಮಂತಪ್ಪ ದುರ್ಗಾ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸಾವಿತ್ರಿಬಾಯಿ ಫುಲೆ ಅವರ 194ನೇ ಜಯಂತಿ ಅಂಗವಾಗಿ ಜಿಲ್ಲಾ ಮಾದಿಗ ಯುವ ಸೇನೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಉನ್ನತ ವರ್ಗಕ್ಕೆ ಶಿಕ್ಷಣ ಮೀಸಲಿದ್ದ ಕಾಲದಲ್ಲಿ ಫುಲೆ ಅವರು ಮಹಿಳೆಯರಲ್ಲಿ ಅಕ್ಷರ ಜಾಗೃತಿಗೆ ನಾಂದಿಯಾಡಿದರು. ಅಲ್ಲದೆ, ಅನೇಕ ಸಂಕಷ್ಟ, ಅವಮಾನ ಎದುರಿಸಿದರು. ಎಲ್ಲವನ್ನು ತಾಳ್ಮೆಯಿಂದ ಸಹಿಸಿಕೊಂಡು ಕ್ರಮೇಣ ಅಕ್ಷರದವ್ವ ಎಂಬ ಖ್ಯಾತಿ ಗಳಿಸಿದರು ಎಂದು ಸ್ಮರಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಹಗುರವಾಗಿ

ಮಾತನಾಡಿದ್ದನ್ನು ದಲಿತ ರಾಜಕಾರಣಿಗಳು ವಿರೋಧಿಸುತ್ತಿಲ್ಲ. ಕುರ್ಚಿಗೆ ಅಂಟಿಕೊಂಡಿದ್ದಾರೆ. ಇದರ ವಿರುದ್ಧ ಸಮುದಾಯದವರು

ಜಾಗೃತರಾಗಬೇಕೆಂದು ಎಚ್ಚರಿಸಿದರು.

ಉಪನ್ಯಾಸಕ ಡಾ. ಎಂ.ವೇದಾಂತ ಏಳಂಜಿ ಮಾತನಾಡಿ, ಶೋಷಿತ ಸಮುದಾಯಕ್ಕೆ ಅಕ್ಷರ ಕಲಿಸಬೇಕೆಂದು ಸಾವಿತ್ರಿಬಾಯಿ ಫುಲೆ 160 ವರ್ಷಗಳ ಹಿಂದೆ ಹೋರಾಡಿದರು. ಅಸ್ಪಶ್ಯತೆ ನಿವಾರಣೆಗಾಗಿ ಶ್ರಮಿಸಿದರು. ಅಂರ್ತಜಾತಿ ವಿವಾಹ ಪ್ರೋತ್ಸಾಹಿಸಿದರು. ಮಹಿಳಾ ಸೇವಾ ಮಂಡಳಿ, ವಸತಿ ನಿಲಯಗಳಿಗೆ ಒತ್ತು ನೀಡಿದರು. ಅವರ ಲೇಖನ ಓದುತ್ತಲೇ ಅಂಬೇಡ್ಕರ್ ಪ್ರೇರೇಪಿತರಾದರು. ಹೀಗಾಗಿ ಅವರನ್ನು ಸರ್ಕಾರ ಗೌರವಿಸಬೇಕಿದೆ ಎಂದು ಒತ್ತಾಯಿಸಿದರು.

ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ, ದೇಶದ ಮೊದಲ ಶಿಕ್ಷಕಿಯಾದ ಫುಲೆ ಅವರು, ಶಾಲೆ ತೆರೆದು ಸರ್ವ ಜಾತಿಯವರಿಗೂ ಅಕ್ಷರ ಕಲಿಸಲು ಅನುವು ಮಾಡಿಕೊಟ್ಟರು. ಕಾಲಕ್ರಮೇಣ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಬೆಳವಣಿಗೆ ಸಾಧಿಸುತ್ತಿದ್ದು, ನಾರಿಶಕ್ತಿಗೆ ಕಾರಣರಾಗಿದ್ದಾರೆ ಎಂದು ಸ್ಮರಿಸಿದರು.

ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ಸತ್ಯಪ್ಪ ಮಲ್ಲಾಪುರ, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಬೆಳಗಟ್ಟ, ಕೆಕೆಎನ್‌ಎಸ್‌ಎಸ್ ಸಂಘಟನೆಯ ಗಣೇಶಯ್ಯ, ಹನುಮಂತಪ್ಪ ಗೋನೂರು ಇತರರಿದ್ದರು.