ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿಯಲ್ಲಿ ಕಲಬುರಗಿಯ ಮಹೇಶ್ವರಿ ಷಣ್ಮುಖಯ್ಯ ಸ್ವಾಮಿ ಅವರಿಗೆ ಸಾವಿತ್ರಿಬಾಯಿ ಫುಲೆ ಶಿಕ್ಷಣ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಡಾ.ಗೀತಾ ಈಶ್ವರ ಖಂಡ್ರೆ, ಸಾರಿಕಾ ಗಂಗಾ, ಕೀರ್ತಿಲತಾ ಹೊಸಾಳೆ, ಸಾಗರ ವೈಜಿನಾಥ, ಮೋಹನ ರೆಡ್ಡಿ ಇದ್ದರು. 
ಜಿಲ್ಲೆ

ಸಾವಿತ್ರಿಬಾಯಿ ಆದರ್ಶ ಪ್ರೇರಣೆ ಆಗಲಿ

ರಾಜು ಯಮಕನಮರಡಿ

ಭಾಲ್ಕಿ: ಸಾವಿತ್ರಿಬಾಯಿ ಫುಲೆ ತಮ್ಮ ಜೀವನದುದ್ದಕ್ಕೂ ದೌರ್ಜನ್ಯ, ನಿಂದನೆಯನ್ನು ದಿಟ್ಟತನದಿಂದ ಎದುರಿಸಿ ಸಮಾಜದಲ್ಲಿ ನೊಂದವರ ಪರವಾಗಿ ಧ್ವನಿಯೆತ್ತಿದ್ದರು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.

ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬುದ್ದ, ಬಸವಣ್ಣನವರ ವಿಚಾರಧಾರೆ ಸಾವಿತ್ರಿಬಾಯಿ ಫುಲೆ ತಮ್ಮ ಜೀವನದಲ್ಲಿ ಅನುಸರಿಸಿದರು. ಸಮಾಜದಲ್ಲಿ ಅವಮಾನ, ನೋವು, ನಿಂದನೆಯನ್ನು ದಿಟ್ಟತನದಿಂದ ಎದುರಿಸಿ ಮಹಿಳೆಯರಿಗೆ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದರು. ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಿದ ಫುಲೆ ಅವರ ಚಿಂತನೆ, ಆದರ್ಶಗಳು ನಮ್ಮೆಲ್ಲರಿಗೆ ಪ್ರೇರಣೆ ಆಗಬೇಕು ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಹತ್ಯೆಗೆ ಬಂದ ಹಂತಕರ ಮನ ಪರಿವರ್ತನೆ ಮಾಡಿದ ಶ್ರೇಯಸ್ಸು ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ. ಅವರ ಸಾಧನೆ, ಸಾಹಸಕ್ಕೆ ಅಂದಿನ ಬ್ರಿಟಿಷ ಸರಕಾರ ಪುರಸ್ಕಾರ ನೀಡಿ ಗೌರವಿಸಿದೆ. ಪುಣೆಯಲ್ಲಿ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಪರಿಶಿಷ್ಟ ಜಾತಿ, ಪಂಗಡ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಾಗರ ವೈಜಿನಾಥ ಮಾತನಾಡಿ, ಭಾರತದ ಪ್ರಪ್ರಥಮ ಶಿಕ್ಷಕಿ ಎನ್ನುವ ಹೆಗ್ಗಳಿಕೆ ಹೊಂದಿರುವ ಸಾವಿತ್ರಿಬಾಯಿ ಫುಲೆ ಮಹಿಳಾ ಕುಲಕ್ಕೆ ಸ್ಪೂರ್ತಿ ಆಗಿದ್ದಾರೆ ಎಂದು ಹೇಳಿದರು.

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಸಾರಿಕಾ ಗಂಗಾ ಬಸವಗುರುವಿನ ಪೂಜೆ ನೆರವೇರಿಸಿದರು. ತಾಲೂಕು ಅಧ್ಯಕ್ಷೆ ಕೀರ್ತಿಲತಾ ಹೊಸಾಳೆ, ಸರಿತಾಕುಮಾರಿ ಗಾಯಕವಾಡ, ಪ್ರಾಚಾರ್ಯ ಬಸವರಾಜ ಮೊಳಕೀರೆ ಇತರರಿದ್ದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರು. ಲಕ್ಷ್ಮಣ ಮೇತ್ರೆ ನಿರೂಪಣೆ ಮಾಡಿದರು. ಸಿದ್ರಾಮ ಗೊಗ್ಗಾ ವಂದಿಸಿದರು.

ಮಹೇಶ್ವರಿ ಸ್ವಾಮಿಗೆ ಫುಲೆ ಪ್ರಶಸ್ತಿ: ಹಿರೇಮಠ ಸಂಸ್ಥಾನದ ವಿದ್ಯಾಪೀಠ ಟ್ರಸ್ಟ್ನ ವತಿಯಿಂದ ಸ್ಥಾಪಿಸಿದ ಚೊಚ್ಚಲ ಸಾವಿತ್ರಿಬಾಯಿ ಫುಲೆ ಶಿಕ್ಷಣ ಸೇವಾ ಪ್ರಶಸ್ತಿಯನ್ನು ಕಲಬುರಗಿಯ ರಾಜೀವಗಾಂಧಿ ಸ್ಮಾರಕ ಪ್ರೌಢ ಶಾಲೆಯ ಶಿಕ್ಷಕಿ ಮಹೇಶ್ವರಿ ಷಣ್ಮುಖಯ್ಯ ಸ್ವಾಮಿ ಅವರಿಗೆ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ಗೀತಾ ಈಶ್ವರ ಖಂಡ್ರೆ ಪ್ರಶಸ್ತಿ ಪ್ರದಾನ ಮಾಡಿದರು.

ಸಾವಿತ್ರಿಬಾಯಿ ಫುಲೆ ಮಹಾರಾಷ್ಟçದಲ್ಲಿ ಜನಿಸಿದ ೧೯ ನೇ ಶತಮಾನದ ಸಮಾಜ ಸುಧಾರಕಿ. ಅವರು ದೇಶದಲ್ಲಿ ಮಹಿಳಾ ಶಿಕ್ಷಣದ ಹರಿಕಾರರಾಗಿದ್ದರು.

| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರು, ಬಸವಕಲ್ಯಾಣ