ಮದ್ದೂರು: ಅಕ್ಷರ ಅವ್ವ ಸಾವಿತ್ರಿ ಬಾಯಿ ಫುಲೆ ಅವರು ಶೋಷಿತ ವರ್ಗಕ್ಕೆ ಶಿಕ್ಷಣ ನೀಡಿದ ಮಹಾ ತಾಯಿ. ಒಂದು ವರ್ಗಕ್ಕೆ ಸೀಮಿತವಾದ ಶಿಕ್ಷಣವನ್ನು ಎಲ್ಲಾ ವರ್ಗದ ಜನರಿಗೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕಾ ಸಂಶೋಧನಾ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜು ತಿಳಿಸಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಮದ್ದೂರು ತಾಲೂಕು ಘಟಕದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದಿನ ಕಾಲದಲ್ಲಿ ಒಂದು ವರ್ಗಕ್ಕೇ ಮಾತ್ರ ಶಿಕ್ಷಕರಾಗುವ ವ್ಯವಸ್ಥೆ ಇತ್ತು. ಅದನ್ನು ಧಿಕ್ಕರಿಸಿ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ನೀಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಂಶುಪಾಲ ಹನುಮಂತರಾಯಪ್ಪ ಮಾತನಾಡಿ, ಸಾವಿತ್ರಿ ಬಾಯಿ ಫುಲೆ ದಂಪತಿ ಸಮಾಜ ಸುಧಾರಣೆಗಾಗಿ ಜೀವನವನ್ನೇ ತ್ಯಾಗ ಮಾಡಿದರು. ಅವರ ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಇಂಜಿನಿಯರ್ ಸಿ.ಲಿಂಗಯ್ಯ ಅವರನ್ನು ಅಭಿನಂದಿಸಲಾಯಿತು.
ಪರಿಷತ್ ಜಿಲ್ಲಾ ಅಧ್ಯಕ್ಷ ಶಿವಲಿಂಗಯ್ಯ, ತಾಲೂಕು ಅಧ್ಯಕ್ಷ ಡಿ.ಸಿ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಿವಕುಮಾರ, ಗೌರವ ಮಾರ್ಗದರ್ಶಕ ಶಂಕರಯ್ಯ, ಮುಖಂಡರಾದ ಶ್ರೀನಿವಾಸ್, ಗಂಗಾಧರ್, ಪುಟ್ಟಸ್ವಾಮಿ ಕೃಷ್ಣೇಗೌಡ, ಜಯಶಂಕರ್, ಚಿಕ್ಕಬೋರಯ್ಯ ಇದ್ದರು.