ಚಿತ್ರದುರ್ಗ: ಸಾಹಿತ್ಯ, ಧಾರ್ಮಿಕ, ಶೈಕ್ಷಣಿಕವಾಗಿ ಶ್ರೀಮಂತಿಕೆ ಹೊಂದಿರುವ ಮುರುಘಾಮಠ ಸಾಮಾಜಿಕವಾಗಿ ಜನಪರ ಆಶಯಗಳೊಂದಿಗೆ ಕೆಲಸ ಮಾಡುತ್ತ ಬಂದಿದೆ ಎಂದು ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಾಪಕ ಡಾ. ಚೇತನ್ ಹೇಳಿದರು.
ಶ್ರೀಮಠದಲ್ಲಿ ಗುರುವಾರ ಶ್ರಾವಣಮಾಸದ ಅಂಗವಾಗಿ ವಚನಾಭಿಷೇಕ ಹಾಗೂ ಮುರುಘಾ ಗುರುಪರಂಪರೆಯ ಸ್ವಾಮೀಜಿಗಳ ವ್ಯಕ್ತಿತ್ವ ದರ್ಶನ ಕಾರ್ಯಕ್ರಮದಲ್ಲಿ ಶ್ರೀಪೀಠದ 12ನೇ ಗುರುಗಳಾದ ಶ್ರೀ ಸಾವಳಗಿ ಗುರುಶಾಂತ ಸ್ವಾಮೀಜಿ ಕುರಿತು ವಿಷಯಾವಲೋಕನ ಮಾಡಿದರು. ಕಾರ್ಯಬಾಹುಳ್ಯದ ನಡುವೆ ಶಿವಯೋಗಕ್ಕಾಗಿ ಚಿದ್ವಿಲಾಸ ಭವನ ಕಟ್ಟಿ ಅಲ್ಲಿ ನಿತ್ಯ ಪೂಜೆ, ಪ್ರಸಾದ, ಜಂಗಮ ದಾಸೋಹ ನಡೆಸುತ್ತಾ ಶೂನ್ಯಪೀಠದ ಸ್ಥಿರತೆಯನ್ನು ಸಾವಳಗಿ ಶ್ರೀಗಳು ಕಾಪಾಡಿದ್ದಾರೆ ಎಂದರು.
ಸಮ್ಮುಖ ವಹಿಸಿದ್ದ ಶ್ರೀಮಠದ ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ,ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಸಾವಳಗಿಯ ವಿರಕ್ತಮಠದ ಶ್ರೀಗಳು ಬೃಹನ್ಮಠ ಪೀಠವನ್ನೇರಿದ್ದರೆಂದರು.
ಶ್ರೀಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಶ್ರೀ ಬಸವಕುಮಾರ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲ್ಕೆರೆ ಪೂರ್ಣಾನಂದ ಶ್ರೀಗಳು, ಇಳಕಲ್‌ನ ಬಸವರಾಜ ಶ್ರೀಗಳು, ಜಾಗತಿಕ ಲಿಂಗಾಯತ ಸಭಾದ ಬಸವರಾಜ ಕಟ್ಟಿ, ಗೂಳಯ್ಯನಹಟ್ಟಿ ಮುರಾರ್ಜಿ ಶಾಲೆ ಪ್ರಾಚಾರ್ಯ ಮಂಜುನಾಥ ರೆಡ್ಡಿ, ವೀರಭದ್ರಪ್ಪ, ವಿಶಾಲಾಕ್ಷಮ್ಮ, ರಮೇಶ್ ಮತ್ತಿತರರು ಇದ್ದರು.
ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಶಿಕ್ಷಕ ರಾಜು ಸ್ವಾ ಗತಿಸಿ, ಶಿಕ್ಷಕ ಬಸವನಗೌಡ ನಿರೂಪಿಸಿದರು. ಪುಟ್ಟಸ್ವಾಮಿ ವಂದಿಸಿದರು.