ಜಿಲ್ಲೆ

ಸಾವರ್ಕರ್ ಭಾವಚಿತ್ರ ಇಡುವುದು ಹಿಂದು ಧರ್ಮಕ್ಕೆ ಅವಮಾನ: ಬಿ.ಕೆ ಹರಿಪ್ರಸಾದ್

ಮೈಸೂರು: ಗಣಪತಿ ಉತ್ಸವದಲ್ಲಿ ಸಾವರ್ಕರ್ ಭಾವಚಿತ್ರ ಇಡುವುದು ಹಿಂದು ಧರ್ಮಕ್ಕೆ ಮಾಡುವ ಅವಮಾನವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಆಕ್ರೋಶವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಪತಿ ಉತ್ಸವದಲ್ಲಿ ಸಾವರ್ಕರ್ ಫೋಟೊ ಇಡಲು ಮುಂದಾಗುತ್ತಿದ್ದು, ಇದು ಅವಮಾನಕರ ಸಂಗತಿ. ಏಕೆಂದರೆ, ಸಾವರ್ಕರ್ ಒಬ್ಬ ನಾಸ್ತಿಕ. ತಮ್ಮ ಆತ್ಮಕಥೆಯಲ್ಲಿ ಅವರೇ ನನಗೆ ದೇವರ ಮೇಲೆ ನಂಬಿಕೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ನಾಸ್ತಿಕ ಫೋಟೋವನ್ನು ಇಡುವುದರಿಂದ ಯಾರಿಗೆ ಅಪಮಾನವಾಗಲಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಎಂದರು.

ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಬಿಟ್ಟರೆ ಬೇರೆ ಯಾವ ಮಹಾಪುರುಷ ಬಿಜೆಪಿಗೆ ಸಿಕ್ಕಿರಲಿಲ್ಲ. ಇದೀಗ ಸಾವರ್ಕರ್ ಹೆಸರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಸಾವರ್ಕರ್ ಅಪ್ಪಟ ನಾಸ್ತಿಕ. ಹೀಗಾಗಿ, ಭಾವಚಿತ್ರವನ್ನು ಗಣೇಶೋತ್ಸವದಲ್ಲಿ ಇಡುವ ಮೂಲಕ ಹಿಂದು ಧರ್ಮಕ್ಕೆ ಅಪಮಾನ ಮಾಡಲು ಬಿಜೆಪಿಯವರು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ. 6 ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಒಂದೇ ಒಂದು ಉದಾಹರಣೆ ಇದ್ದರೆ ಕೊಡಲಿ ಸಾಕು ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಕಾಂಗ್ರೆಸ್‌ನವರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಆದರೆ, ಬಿಜೆಪಿಯವರು ನೈಜ ಇತಿಹಾಸವನ್ನು ತಿರುಚಿದ್ದಾರೆ ಎಂದು ಹರಿಹಾಯ್ದರು.