ಮೈಸೂರು: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಸಾಧನೆ ಮತ್ತು ಚರಿತ್ರೆಗೆ ಮಸಿ ಬಳಿಯುವ ಹುನ್ನಾರ ನಡೆದಿದ್ದು, ಇದು ಅಕ್ಷಮ್ಯ ಅಪರಾಧವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.
ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಸಾವರ್ಕರ್ ರಥಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದರು.
‘ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ, ಇವ ನಮ್ಮವ, ಇವ ನಮ್ಮವೆಂದೆನಿಸಯ್ಯ’ ಎಂದಿರುವ ಬಸವಣ್ಣನ ವಚನವನ್ನು ಸಾವರ್ಕರ್‌ರನ್ನು ವಿರೋಧಿಸುವವರು ಒಮ್ಮೆ ಓದಿಕೊಳ್ಳಬೇಕು ಎಂದು ಕುಟುಕಿದರು.
ದೇಶ ಮಹತ್ವದ ಕಾಲಘಟ್ಟದಲ್ಲಿದ್ದು, ವಿಶ್ವಗುರು ಆಗುವತ್ತ ದಾಪುಗಾಲು ಹಾಕುತ್ತಿದೆ. ಇನ್ನೊಂದೆಡೆ ಅನೇಕ ಸವಾಲುಗಳಿವೆ. ಆದರೆ, ದೇಶದ ಮೌಲ್ಯಕ್ಕೆ ಮಸಿ ಬಳಿಯುವ ಕೆಲಸ ಕೆಲವರಿಂದ ನಡೆದಿದೆ. ಚಿಲ್ಲರೆ ರಾಜಕಾರಣಕ್ಕಾಗಿ ಬ್ರಿಟಿಷರನ್ನು ನಡುಗಿಸಿದ ವೀರ ಸ್ವಾತಂತ್ರೃ ಹೋರಾಟಗಾರ ಸಾವರ್ಕರ್ ಕುರಿತು ಅಪಪ್ರಚಾರ ನಡೆದಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಮೈಸೂರು ಪ್ರಾಂತ್ಯಕ್ಕೆ ವಿಶಿಷ್ಟ ಸ್ಥಾನ
ದೇಶದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಮೈಸೂರು ಪ್ರಾಂತ್ಯ ವಿಶಿಷ್ಟ ಸ್ಥಾನ ಪಡೆದಿದೆ. ಸ್ವಾತಂತ್ರೃದ ಬಳಿಕ ಒಕ್ಕೂಟ ವ್ಯವಸ್ಥೆಗೆ ಸೇರಿದ ಮೊದಲ ರಾಜಮನೆತನ ಮೈಸೂರು ಸಂಸ್ಥಾನ. ಇಂತಹ ಜಾಗದಲ್ಲಿ ರಥಯಾತ್ರೆಗೆ ಚಾಲನೆ ನೀಡಿರುವುದು ಸೌಭಾಗ್ಯ. 8 ದಿನದ ಯಾತ್ರೆ ಅಷ್ಟ ದಿಕ್ಕಿನಲ್ಲೂ ಸಾಗಿ ಸಾವರ್ಕರ್ ಅವರ ಸಂದೇಶ, ಜೀವನ ಮೌಲ್ಯ, ದೇಶ ಪ್ರೇಮದ ಸಂದೇಶವನ್ನು ಸಾರಲಿದೆ. ಯುವಶಕ್ತಿ, ರಾಷ್ಟ್ರಪ್ರೇಮಿಗಳನ್ನು ಉದ್ದೀಪನಗೊಳಿಸಿ, ದೇಶದ ವಿದ್ರೋಹಿಗಳಿಗೂ ಎಚ್ಚರಿಕೆ ನೀಡುವ ಕೆಲಸವನ್ನು ರಥಯಾತ್ರೆ ಮಾಡಲಿದೆ ಎಂದರು.
ವೇದಿಕೆ ಮೇಲೆ ಪ್ರತಿಷ್ಠಾನದ ಅಧ್ಯಕ್ಷೆ ಯಶಸ್ವಿನಿ, ರಥಯಾತ್ರೆಯ ಸಂಚಾಲಕ ರಜತ್ ಮಾತ್ರ ಇದ್ದರು. ಸಭಿಕರ ಸಾಲಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣ್‌ಗೌಡ, ಸಂಸದ ಪ್ರತಾಪಸಿಂಹ, ಶಾಸಕ ಎಲ್.ನಾಗೇಂದ್ರ, ಕರ್ನಾಟಕ ರಾಜ್ಯ ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಇನ್ನಿತರರು ಇದ್ದರು
ದಾರಿ ತಪ್ಪಿಸುವ ಕೆಲಸಜನಸಾಮಾನ್ಯರಿಗೆ ಸ್ವಾತಂತ್ರೃ ಹೋರಾಟದ ಅರಿವು ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಸಾವರ್ಕರ್, ಸ್ವಾತಂತ್ರೃ ಹೋರಾಟಗಾರರ ಸಂದೇಶವನ್ನು ದೇಶದ ಎಲ್ಲೆಲ್ಲಿಯೂ ಮತ್ತು ಎಲ್ಲ ಕಡೆಗೂ ತಲುಪಿಸುವ ಕೆಲಸ ಆಗಬೇಕಿದೆ.-ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ
ರಥಯಾತ್ರೆ ಸಾಗುವ ದಾರಿ
ಸಾವರ್ಕರ್ ಜೀವನ ಚರಿತ್ರೆ ಮತ್ತು ಹೋರಾಟವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ‘ಸಾವರ್ಕರ್ ರಥಯಾತ್ರೆ’ 8 ದಿನಗಳ ಕಾಲ ಮೈಸೂರು-ಮಂಡ್ಯ-ಚಾಮರಾಜನಗರ ಜಿಲ್ಲೆಗಳಲ್ಲಿ ಸಂಚರಿಸಲಿದೆ.
ಮೊದಲ ದಿನ ನಗರದ ಟೆರಿಷಿಯನ್ ಕಾಲೇಜು ಮಾರ್ಗವಾಗಿ ಕ್ಯಾತಮಾರನಹಳ್ಳಿ, ತಿಲಕನಗರ, ಮಾತೃಮಂಡಳಿ ವೃತ್ತ, ಟೆಂಟ್ ವೃತ್ತ, ವಿವೇಕಾನಂದನಗರ, ಚಾಮುಂಡಿಪುರಂ ವೃತ್ತ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಥಯಾತ್ರೆ ಸಾಗಿತು.
ಆ.24ರಂದು ಮೈಸೂರು ಗ್ರಾಮಾಂತರ ಪ್ರದೇಶದಲ್ಲಿ ರಥೆಯಾತ್ರೆ ಸಂಚರಿಸಲಿದ್ದು, ಜಯಪುರ, ಹಂಪಾಪುರ, ಎಚ್.ಡಿ.ಕೋಟೆ, ಸರಗೂರು ಭಾಗಗಳಲ್ಲಿ, ಆ.25ರಂದು ನಂಜನಗೂಡು, ಬೇಗೂರು, ಗುಂಡ್ಲುಪೇಟೆ, ತೆರಕಣಾಂಬಿಯಲ್ಲಿ ಸಂಚರಿಸಲಿದೆ.
ಆ.26ರಂದು ಚಾಮರಾಜನಗರ, ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ, ಹನೂರು, ಕೌದಳ್ಳಿಯಲ್ಲಿ, ಆ.27ರಂದು ತಿ.ನರಸೀಪುರ, ಬನ್ನೂರು, ಕಿರುಗಾವಲು, ಮಳವಳ್ಳಿ, ಹಲಗೂರು, ಕೆ.ಎಂ.ದೊಡ್ಡಿ, ಮದ್ದೂರು, ಬೇಸಗರಹಳ್ಳಿಯಲ್ಲಿ ಸಾಗಲಿದೆ .
ಆ.28ರಂದು ಕೊಪ್ಪ, ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ ಭಾಗಗಳಲ್ಲಿ ಸಂಚರಿಸಿದರೆ, ಆ.29ರಂದು ಕಿಕ್ಕೇರಿ, ಕೆ.ಆರ್.ಪೇಟೆ, ಸಾಲಿಗ್ರಾಮ, ಪಿರಿಯಾಪಟ್ಟಣ ಭಾಗದಲ್ಲಿ ಸಂಚರಿಸಲಿದೆ. ಆ.30ರಂದು ಹುಣಸೂರು ಮಾರ್ಗವಾಗಿ ಮೈಸೂರಿಗೆ ಹಿಂದಿರುಗಲಿದ್ದು, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಮಾರೋಪ ಸಮಾರಂಭ ಜರುಗಲಿದೆ.