ಜೆಡಿಎಸ್ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ. 
ಜಿಲ್ಲೆ

ಸಾವಯುವ ಕೃಷಿಗೆ ಮೊದಲು ರೈತರು ತಯಾರಾಗಲಿ

ಸಂತೋಷ ದೇಶಪಾಂಡೆ

ಬಾಗಲಕೋಟೆ: ನಾವು ರಸಗೊಬ್ಬರ ಬಳಕೆ ಮಾಡಲ್ಲ. ಸಾವಯವ ಕೃಷಿ ಮಾಡುತ್ತೇವೆ ಎಂದು ಮೊದಲು ರೈತರು ತಯಾರಾಗಬೇಕು. ಆಗ ನಿಮಗೆಲ್ಲ ಸಾವಯವ ಗೊಬ್ಬರ ಕೊಡಲು ಸಾವು ಸಿದ್ದ ಎಂದು ಮಾಜಿ ಸಿಎಂ ಕುಮಾರಸ್ವಾಮಿ ರೈತರಿಗೆ ಹೇಳಿದ್ದಾರೆ.

ಬಾದಾಮಿ ಕ್ಷೇತ್ರದ ಕುಳಗೇರಿ ಕ್ರಾಸ್ ಹತ್ತಿರ ಸೋಮವಾರ ರಾತ್ರಿ ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ ಅವರ ಪ್ರವಾಹ ಸಂತ್ರಸ್ತರ ಗ್ರಾಮಗಳ ಪಾದಯಾತ್ರೆ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಪಂಚರತ್ನ ಕಾರ್ಯಕ್ರಮಗಳನ್ನು ಕೊಡುವ ಬಗ್ಗೆ ವಿವರಿಸುತ್ತಿದ್ದ ವೇಳೆ, ರೈತರಿಗೆ ಸಾವಯವ ಗೊಬ್ಬರ ಕೊಡಿ ಎಂದು ರೈತರೊಬ್ಬರು ಕೂಗಿ ಹೇಳಿದರು.

ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ನಾವು ಚಿಕ್ಕವರಿದ್ದಾಗ ರಸಗೊಬ್ಬರ ಬಳಕೆ ಮಾಡುತ್ತಿರಲಿಲ್ಲ. ಇವತ್ತು ದನಗಳನ್ನು ಸಾಕುತ್ತಿಲ್ಲ. ಸಾಲ ಮಾಡಿ ಟ್ರ‍್ಯಾಕ್ಟರ ತೆಗೆದುಕೊಳ್ಳುತ್ತೀರಿ. ಬಳಿಕ ಸಾಲ ಕಟ್ಟಲಾಗದೇ ಪರದಾಡುತ್ತೀರಿ. ಹೀಗಾಗಿ ನೀವು ಮೊದಲು ರಸಗೊಬ್ಬರ ಬಳಕೆ ಮಾಡಲ್ಲ ಎಂದು ನಿರ್ಧಾರ ಮಾಡಿ, ಸಾವಯವ ಕೃಷಿಗೆ ಸಜ್ಜಾಗುವಂತೆ ಸಲಹೆ ನೀಡಿದರು.

ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಅಽಕಾರಕ್ಕೆ ಬರುವ ವಿಶ್ವಾಸ ಇದೆ. ಬಾದಾಮಿಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿ ಮುಂದಿನ ಯುಗಾದಿ ವೇಳೆಗೆ ಕ್ಷೇತ್ರದಲ್ಲಿ ರಸ್ತೆ, ಒಳಚರಂಡಿ, ಕುಡಿವ ನೀರು, ಕೆರೆಕಟ್ಟೆ ತುಂಬಿಸಿ, ಮೂಲ ಸೌಕರ್ಯ ಒದಗಿಸುತ್ತೇವೆ ಎಂದು ಅಭಯ ನೀಡಿದರು.

ಕಾಂಗ್ರೆಸ್‌ನ ಗೃಹ ಲಕ್ಷ್ಮಿ ಜಗಳ ಹಚ್ಚುವ ಯೋಜನೆ :
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ವಿರುದ್ದ ಹರಿಹಾಯ್ದರು. ಯಾವುದು ಖಚಿತ, ಯಾವುದು ಉಚಿತ ಎಂದು ಪ್ರಶ್ನಿಸಿದ ಅವರು, ತಿಂಗಳಿಗೆ ೨ ಸಾವಿರ ಕೊಡುವ ಗೃಹ ಲಕ್ಷ್ಮೀ ಯೋಜನೆ ಅತ್ತೆ ಸೊಸೆ ನಡುವೆ ಜಗಳ ಹಚ್ಚುವ ಯೋಜನೆಯಾಗಿದೆ. ಆದರೆ, ಕುಮಾರಸ್ವಾಮಿ ಅವರು ಹೇಳಿದ್ದಾರೆ. ವಿಧವೆಯರಿಗೆ ತಿಂಗಳಿಗೆ ೨೮೦೦ ರೂ. ವೃದ್ದ ಹೆಣ್ಣು, ಗಂಡು ಯಾರೇ ಇದ್ದರೂ ತಲಾ ೫ ಸಾವಿರ ರೂ. ಪೆನ್ಶನ್ ಕೊಡುವುದಾಗಿ ಘೋಷಿಸಿದ್ದಾ ಎಂದರು.
ಲೋಕಾಬಲೆಗೆ ಬಿದ್ದಿರುವ ಶಾಸಕ ಮಾಡಾಳ ವಿರುಪಾಕ್ಷಪ್ಪನ ಪುತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಪಿಯ ಧನ ಪಾಪಿಗೆ ಅಲ್ಲದೇ ಸತ್ಪಾತ್ರಕ್ಕೆ ಸಲ್ಲದಯ್ಯ… ನಾಯಿಯ ಹಾಲು ನಾಯಿಗೆ ಅಲ್ಲದೇ ಪಂಚಾಮೃತಕ್ಕೆ ದಕ್ಕದಯ್ಯ ವಚನ ಉಲ್ಲೇಖ್ಸಿಸಿ ಕಿಡಿಕಾರಿದರು.
ಮಾಡಾಳ ಪುತ್ರನ ಮನೆಯಲ್ಲಿ ೮ ಕೋಟಿ ಗಂಟು. ಮಗನ ಹತ್ತಿರವೇ ಇಷ್ಟು ಇದ್ದರೆ ಅಪ್ಪನ ಹತ್ತಿರ ಎಷ್ಟು ಇರಬೇಕು? ರಾಜ್ಯದ ದುಡ್ಡನ್ನು ಲೂಟಿ ಹೊಡೆದ ಮುಂಡೇವು ಮನೆಯಲ್ಲ ಕೂಡಿ ಇಟ್ಟಿದ್ದಾರೆ. ಕುಮಾರಸ್ವಾಮಿ ೨ ಸಲ ಸಿಎಂ ಆಗಿದ್ದರು. ದೇವೇಗೌಡರು ೫೦ ವರ್ಷ ರಾಜಕಾರಣ ಮಾಡಿದ್ದಾರೆ. ಅವರ ಬಳಿ ಇರುವುದು ನಾಲ್ಕು ಜುಬ್ಬಾ, ನಾಲ್ಕು ಪಂಚೆ ಮಾತ್ರ ಎಂದರು.
ವೇದಿಕೆಯಲ್ಲಿ ಬಾದಾಮಿ ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ ಪಾದಯಾತ್ರೆ ಹಾಗೂ ಗ್ರಾಮ ವಾಸ್ತವ್ಯದ ಕುರಿತು ಮಾತನಾಡಿದರು. ಶಾಸಕ ರಾಜಾವೆಂಕಟಪ್ಪ ನಾಯಕ, ಚಂದ್ರಕಾಂತ, ಸ್ಥಳೀಯ ಮುಖಂಡ ಪ್ರಕಾಶ ಗಾಣಗೇರ, ಬಾನು ಹುನಗುಂಡಿ, ಈರಣ್ಣ ಹುನಗುಂದ, ಲಕ್ಷ್ಮಣ ಲೋಕಾಪುರ ಸೇರಿ ಪಕ್ಷದ ಪದಾಽಕಾರಿಗಳು ಉಪಸ್ಥಿತರಿದ್ದರು.