ತರೀಕೆರೆ: ರಾಸಾಯನಿಕ ಬಳಸಿ ಬೆಳೆಯುವ ಆಹಾರ ಪದಾರ್ಥಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ನೈಸರ್ಗಿಕ ಕೃಷಿಕ ಆರ್.ಸೋಬ್ಯಾನಾಯ್ಕ ಕಳವಳ ವ್ಯಕ್ತಪಡಿಸಿದರು.
ಸಿದ್ಲೀಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಏರ್ಪಡಿಸಿದ್ದ ಕೃಷಿ ನೀರಾವರಿ ಮತ್ತು ಸಾವಯವ ಕೃಷಿ ಕುರಿತಾದ ರೈತರ ಕ್ಷೇತ್ರ ಪಾಠ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು ಸಾವಯವ ಕೃಷಿ ಜತೆ ಆಧುನಿಕ ನೀರಾವರಿ ಪದ್ಧತಿ ಅನುಸರಿಸುವುದು ಮುಖ್ಯ. ಕೃಷಿಯಲ್ಲಿ ನೀರಿನ ಬಳಕೆ ಮಿತಿ ಮೀರಿದೆ. ಹಾಗಾಗಿ ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿ ಕಡೆ ಹೆಚ್ಚು ಗಮನ ಕೊಡಬೇಕು. ದೇಶದಲ್ಲಿ ಸಾವಯವ ಕೃಷಿಯಲ್ಲಿ ಏರಿಕೆ ಕಂಡಿರುವುದು ದೇಶದ ಸುಸ್ಥಿರ ಕೃಷಿ ಪದ್ಧತಿಗೆ ಉತ್ತಮ ಉದಾಹರಣೆ. ಆಹಾರ ಸುರಕ್ಷತೆ, ಪರಿಸರದ ಪ್ರಭಾವ, ಮಾನವನ ಆರೋಗ್ಯದ ಬಗ್ಗೆ ಕಾಳಜಿ ಬೆಳೆದಂತೆ ಸಾವಯವ ಕೃಷಿ ಸಾಂಪ್ರದಾಯಿಕ ವಿಧಾನಗಳಿಗೆ ಪರ್ಯಾಯವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
ಜಾಗತೀಕ ಮಟ್ಟದಲ್ಲಿ ಸಾವಯವ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಲಾಭದಾಯಕ ಮಾರುಕಟ್ಟೆ ಅವಕಾಶ ಒದಗಿಸುತ್ತಿದೆ. ಅಧಿಕ ಇಳುವರಿ ಆಸೆಯಲ್ಲಿ ರಾಸಾಯನಿಕ ಗೊಬ್ಬರ ಬಳಸಿ ಭೂಮಿ ಬರಡಾಗಿಸಿಕೊಳ್ಳುತ್ತಿರುವ ರೈತರಿಗೆ ಸಾವಯವ ಕೃಷಿಯತ್ತ ಪರಿವರ್ತಿಸುವ ಜತೆ ಸಿರಿಧಾನ್ಯಗಳ ಬಳಕೆ ಮಾಡುವ ಕುರಿತು ಮಾರ್ಗದರ್ಶನ ನೀಡಬೇಕು. ಕೃಷಿಗೆ ಪೂರಕವಾಗಿ ಜೀವಾಮೃತ, ಘನ ಜೀವಾಮೃತ ತಯಾರಿಸಿ ಬಳಸುವುದರ ಮಾಹಿತಿ ತಿಳಿಸಬೇಕು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ನಿಂಗಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷೆ ಸುಮಿತ್ರಾ, ತಾಲೂಕು ಕೃಷಿ ಮೇಲ್ವಿಚಾರಕ ಸಂತೋಷ್, ಸೇವಾಪ್ರತಿನಿಧಿ ರಂಗನಾಥ್ ಇತರರಿದ್ದರು.