ಬಾಗಲಕೋಟೆ ತೋವಿವಿಯ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತೋವಿವಿಯ ೧೬ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಧಾರವಾಡದ ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ ಉದ್ಘಾಟಿಸಿದರು 
ಜಿಲ್ಲೆ

ಸಾವಯವ ಕೃಷಿಯತ್ತ ಹೆಚ್ಚಿನ ಒಲವು ಅಗತ್ಯ

ಬಾಗಲಕೋಟೆ: ಪ್ರಕೃತಿ ಸಂರಕ್ಷಿಸುವದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದ ಅವಶ್ಯವಾಗಿರುವದರಿಂದ ಇಂದು ನಾವೇಲ್ಲ ಸಾವಯವ ಕೃಷಿಯತ್ತ ಒಲವು ತೋರಬೇಕು ಎಂದು ಧಾರವಾಡದ ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ ಹೇಳಿದರು.

ತೋವಿವಿಯ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತೋವಿವಿಯ ೧೬ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿಯೇ ಸರ್ವಾಽಕ ಕೃಷಿ ಯೋಗ್ಯ ಭೂಮಿಯ ಪ್ರಮಾಣ ಕೆಲವೇ ದೇಶಗಳಲ್ಲಿ ನಮ್ಮ ದೇಶ ಒಂದಾಗಿದ್ದು, ಪ್ರತಿಶತ ೪೦-೪೫ ರಷ್ಟು ಕೃಷಿಗೆ ಯೋಗ್ಯವಾದ ಭೂಮಿ ಇದೆ. ಅದನ್ನು ಹಾಗೆಯೇ ಉಳಿಸಿಕೊಂಡು ಹೋಗುವುದು ಸವಾಲಾಗಿ ಪರಿಣಮಿಸಿದ್ದು, ಕಾರಣ ಇದನ್ನು ಉಳಿಸಿಕೊಂಡು ಹೋಗಲು ಸಣ್ಣ ರೈತರಿಂದ ದೊಡ್ಡ ರೈತರವರೆಗೆ ಉಳಿಸಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಇದ್ದ ಭೂಮಿಯಲ್ಲಿ ಸಾವಯವ ಕೃಷಿ ಪದ್ಧತಿ ಬಳಸಿಕೊಂಡು ಹೆಚ್ಚು ಆರೋಗ್ಯದ ಜೊತೆಗೆ ಹೆಚ್ಚು ಆದಾಯ ಪಡೆಯುವ ಕೆಲಸವಾಗಬೇಕು. ಗೃಹ ಕೃಷಿಯಲ್ಲಿಯೇ ಸಾವಯವ ಕೃಷಿಯಿಂದ ಉತ್ಪಾದಿಸುವದನ್ನು ಕರಗತ ಮಾಡಿಕೊಳ್ಳಬೇಕು. ಸಾವಯವ ಕೃಷಿ ಪದ್ದತಿಯಿಂದ ಭೂಮಿ ಫಲವತ್ತತೆಯನ್ನು ಉಳಿಸಕೊಳ್ಳಲು ಸಾಧ. ಇದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಬಹುದಾಗಿದೆ. ಇದರಿಂದ ಸಾಲಭಾದೆ ಹಾಗೂ ಇತರೆ ಕಷ್ಟಗಳು ಬರದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಮಹೇಶ ಶಿರೂರ ಮಾತನಾಡಿ, ಕಲಿತ ವಿದ್ಯೆ ತೋಟಗಾರಿಕೆ ಆಗಿದ್ದರೆ ಕಾರ್ಯನಿರ್ವಹಿಸುವ ಕ್ಷೇತ್ರ ಬೇರೆಯಾಗಿದೆ. ಶೇ.೫೦ ರಷ್ಟು ವಿದ್ಯಾರ್ಥಿಗಳು ಉದ್ಯಮ ಪ್ರಾರಂಬಿಸಲು ಮುಂದಾಗಿದ್ದಾರೆ. ಉಳಿದವರು ಏನು ಮಾಡಬೇಕೆಂದು ತಿಳಿಯದೇ ಗೊಂದಲದಲ್ಲಿ ಇದ್ದಾರೆ. ಶಿಕ್ಷಣದಲ್ಲಿ ಅಷ್ಟೇ ಅಲ್ಲ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ. ಇಲ್ಲಿಯ ವಿದ್ಯಾರ್ಥಿಯೊಬ್ಬ ಇಂಡಿಯನ್ ಪಾರೆಸ್ಟ ಸರ್ವಿಸ್ (ಐಎಫ್‌ಎಸ್) ಹುದ್ದೆಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಮಾತನಾಡಿ, ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯ ಪ್ರತಿವರ್ಷ ಒಂದೊಂದು ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಇದೀಗ ೪೭ ಕೋಟಿ ರೂ.ಗಳ ವೆಚ್ಚದಲ್ಲಿ ಹವಾಮಾನ ನಿಯಂತ್ರಣ ಬೆಳೆ ಯೋಜನೆ ಎಂಬ ಹೊಸ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಅಲ್ಲದೇ ೧೨೦ ಕೋಟಿ ರೂ.ಗಳ ಮೆಗಾ ಪ್ರೋಜೆಕ್ಟ್ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದರಲ್ಲೂ ಕೂಡಾ ಯಶಸ್ವಿಯಾಗುತ್ತೇವೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ತೋವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯ ಡಾ.ಎಸ್.ಎನ್.ವಾಸುದೇವನ್, ವಿಶ್ರಾಂತ ಕುಲಪತಿ ಎಸ್.ಬಿ.ದಂಡೀನ ಮಾತನಾಡಿದರು. ತೋವಿವಿಯ ಕುಲಸಚಿತ ಮಹಾದೇವ ಮುರಗಿ ತೋವಿವಿಯ ಪ್ರಗತಿಯ ಪಕ್ಷಿ ನೋಟವನ್ನು ತಿಳಿಸಿದರು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಾಧಕರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ತೋವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯೆ ಡಾ.ಅನಿತಾ, ತೋವಿವಿಯ ಶಿಕ್ಷಣ ನಿರ್ದೇಶಕ ಡಾ.ಎನ್.ಕೆ.ಹೆಗಡೆ, ಡೀನ್ ತಮ್ಮಯ್ಯ ಎನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.