ಇಂಡಿ ತಾಲೂಕಿನ ಸಾಲೋಟಗಿಯ ಗ್ರಾಮದಲ್ಲಿ ಶಿವಯೋಗೀಶ್ವರರ ನೀರಾಟ ನಡೆಯಿತು. 
ಜಿಲ್ಲೆ

ಸಾಲೋಟಗಿಯಲ್ಲಿ ನೀರಾಟ ಸಂಪ್ರದಾಯ

ಇಂಡಿ: ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಶಿವಯೋಗೀಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ರಾತ್ರಿ ನೀರಾಟ ಕಾರ್ಯಕ್ರಮ ಜರುಗಿತು.

ಒಳಗಿನ ಗುಡಿಯಿಂದ ಶಿವಯೋಗೀಶ್ವರರ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಹೊರಗಿನ ಗುಡಿಗೆ ಒಯ್ದು ಗದ್ದುಗೆಯಲ್ಲಿ ಕೂಡಿಸಿದ ನಂತರ ರಾತ್ರಿ ಒಂದು ಗಂಟೆಗೆ ನೀರಾಟ ಪ್ರಾರಂಭವಾಯಿತು.

ಗಂಗಾಂಬಿಕೆಯನ್ನು ಸಂಕೇತಿಸುವ ಗಂಗಮ್ಮನ ಬಿಂದಿಗೆಯ ಬಾಯಿಯನ್ನು ಶ್ರೀಗಂಧದ ನೀಳವಾದೆಲೆಯುಕ್ತ ಚಬಕಿಗಳಿಂದೊಂದು ಹನಿ ನೀರೂ ಒಳ ಇಳಿಯದಂತೆ ಭದ್ರ ಪಡಿಸಿದ್ದರು. ಹೊರಗಿನ ಗುಡಿಯ ಮುಂದೆ ಮತ್ತು ಹಿಂದೆ ಇರುವ ಎರಡು ಬಾವಿಗಳಿಂದ ಭಕ್ತರು ಬಿಂದಿಗೆಗಳಲ್ಲಿ ನೀರು ಹೊತ್ತು ಓಡುತ್ತ ಶಿವಯೋಗೀಶ್ವರ ಎಂದು ಕೂಗುತ್ತ ಬಿಂದಿಗೆಯ ಮೇಲೆ ನೀರು ಸುರಿದರು.

ನಸುಕಿನ ಐದು ಗಂಟೆಗೆ ನೀರಾಟ ಮುಕ್ತಾಯವಾಯಿತು. ಗಂಗಮ್ಮನ ಬಿಂದಿಗೆಯನ್ನು ಶಿವಯೋಗೀಶ್ವರರ ಎಡಕ್ಕೆ ತಂದು ಇಟ್ಟರು. ಶ್ರೀಗಂಧದ ಚಟುಕಗಳ ಮೂಲಕ ಬಿಂದಿಗೆಯಲ್ಲಿ ಸಂಗ್ರಹವಾದ ನೀರಿನ ಪ್ರಮಾಣದಷ್ಟು ಆ ವರ್ಷದ ಮಳೆಯಾಗುತ್ತದೆ. ಊರಲ್ಲಿ ಸಮೃದ್ಧಿ ತುಂಬುತ್ತದೆ ಜನರ ನಂಬಿಕೆಯಾಗಿದೆ.

ನೀರಾಟದ ಸಮಯದಲ್ಲಿ ಗಣ್ಯರಾದ ಸೋಮಯ್ಯ ಚಿಕ್ಕಪಟ, ಮಲ್ಲಿಕಾರ್ಜುನ ಕಿವಡೆ, ಭೀಮನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಹಿರಯ್ಯ ಚಿಕ್ಕಯ್ಯ, ಸಾಹಿತಿಗಳಾದ ಗೀತಯೋಗಿ, ದಯಾನಂದ ಸ್ವಾಮಿ, ಸೋಮನಾಥ ಶಿವೂರ, ಭೀಮರಾಯ ಪಾತರ ಹಾಗೂ ಹಿರಿಯರು, ಭಕ್ತರು ಇದ್ದರು.

  • ಹಿನ್ನೆಲೆ: ಶಿವಯೋಗೀಶ್ವರರ ಮಾತಾ ಪಿತೃಗಳ ಅಭಿಪ್ಸೆಯ ಮೇರೆಗೆ ಶಿವಯೋಗೀಶ್ವರರ ಮದುವೆಯು ಗಂಗಾಂಬಿಕೆಯೊಂದಿಗೆ ನಡೆಯುವ ಸಂದರ್ಭದಲ್ಲಿ ಮದುವೆ ಜೋಡಿಯನ್ನು ಸುರಿಗೆ ಸುತ್ತಿ ವಧು ವರರ ಮೇಲೆ ಸುರಿಗೆ ನೀರನ್ನು ಹಾಕುವಾಗ ಆಜನ್ಮ ಬ್ರಹ್ಮಚಾರಿಗಳಾದ ಶಿವಯೋಗೀಶ್ವರರು ಮದುವೆಯನ್ನು ನಿರಾಕರಿಸಿ ಮದುವೆ ಮಂಟಪದಿಂದ ಹೊರ ಹೋಗುತ್ತಾರೆ. ದಾಂಪತ್ಯದ ಸಂಬಂಧ ಬಿಟ್ಟು ಶಿವಯೋಗೀಶ್ವರ ಹೋಗಬೇಡೆಂದು ಕಳಸಿಗಳಲ್ಲಿ ತುಂಬಿದ ಸುರಿಗೆ ನೀರನ್ನು ಎರಚುತ್ತಾರೆ. ಶಿವಯೋಗೀಶ್ವರರು ಅಲ್ಲಿಂದ ದೂರ ಹೋಗಲಾಗಿ ಸುರಿಗೆ ನೀರು ಗಂಗಾಂಬಿಕೆಯ ಮೇಲೆ ಮಾತ್ರ ಬಿಳುತ್ತದೆ. ಈ ಸನ್ನಿವೇಶವೇ ನೀರಾಟದ ರೂಪದಲ್ಲಿ ಧಾರ್ಮಿಕ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಕೇತವಾಗಿದೆ.