ಗೌರಿಬಿದನೂರು: ಸಹಕಾರಿ ಬ್ಯಾಂಕ್‌ಗಳ ಮೂಲಕ ನೀಡುತ್ತಿರುವ ಶೂನ್ಯ ಬಡ್ಡಿದರದ ಸಾಲವನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಡಿ.ಪಾಳ್ಯ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ 32 ರೈತರಿಗೆ 26 ಲಕ್ಷ ರೂ. ಸಾಲದ ಚೆಕ್ ಅನ್ನು ಬುಧವಾರ ವಿತರಿಸಿ ಮಾತನಾಡಿ, ಸಾಲದ ಹಣವನ್ನು ರೈತರು ಉದ್ದೇಶಿತ ಕೃಷಿ ಚಟುವಟಿಕೆಯಲ್ಲಿ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ ಮಾತನಾಡಿ, ರೈತ ಮತ್ತು ಮಹಿಳಾ ಸಂಘಗಳಿಗೆ ಬ್ಯಾಂಕ್ ಆರ್ಥಿಕ ನೆರವು ನೀಡಿ ಬಡವರ ಕೈ ಹಿಡಿಯುತ್ತಿದೆ. ಪಡೆದ ಸಾಲವನ್ನು ಸಕಾಲದಲ್ಲಿ ಹಿಂದಿರುಗಿಸುತ್ತಿದ್ದು, ಇದೇ ರೀತಿ ಜನರು ಬ್ಯಾಂಕ್ ಅನ್ನು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಅಸ್ಲಾಂ ಪಾಷಾ, ಎಪಿಎಂಸಿ ಅಧ್ಯಕ್ಷ ಬೋರ್ವೆಲ್ ಅಶ್ವತ್ಥ್ ರೆಡ್ಡಿ, ಡಿ ಪಾಳ್ಯ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮೆಹಬೂಬ್ ಖಾನ್, ಸಂಘದ ನಿರ್ದೇಶಕ ರಂಗನಾಥಗೌಡ, ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಗೌಡ ಇತರರಿದ್ದರು.