ಜಿಲ್ಲೆ

ಸಾಲ ವಿತರಣೆಯಲ್ಲಿ ಕೊಡಗು ಸಹಕಾರ ಕೇಂದ್ರ ಬ್ಯಾಂಕ್ ಪ್ರಥಮ

ಸೋಮವಾರಪೇಟೆ: ಠೇವಣಿ ಸಂಗ್ರಹ ಮತ್ತು ಸಾಲ ವಿತರಣೆಯಲ್ಲಿ ಕೊಡಗು ಸಹಕಾರ ಕೇಂದ್ರ ಬ್ಯಾಂಕ್ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹೇಳಿದರು.


ಗೌಡಳ್ಳಿ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜಿಲ್ಲೆಯ ಸಹಕಾರಿಗಳ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು.


ಸರ್ಕಾರಿ ಷೇರು ಹೂಡಿಕೆಯಲ್ಲಿ ಶೇ.23 ರಂತೆ ಮೊದಲ ಸ್ಥಾನ ಹಾಗೂ ಸಾವಿರ ಕೋಟಿ ರೂ.ಗಳ ಸಾಲ ನೀಡಿ ಮೊದಲ ಸ್ಥಾನದಲ್ಲಿದ್ದೇವೆ. ಮುಂದಿನ ಸಾಲಿಗೆ 1300ಕೋಟಿ ರೂ.ಗಳ ಠೇವಣಿ ಸಂಗ್ರಹ ಹಾಗೂ 1100ಕೋಟಿ ರೂ.ಗಳ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.


ಜಿಲ್ಲೆಯಲ್ಲಿ ಕೇಂದ್ರ ಬ್ಯಾಂಕ್‌ನ 21 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ವ್ಯವಹಾರದಲ್ಲಿ ವಾಣಿಜ್ಯ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುತ್ತಿದ್ದೇವೆ. ಕಾಫಿ ಆಹಾರ ಧಾನ್ಯಗಳ ಪಟ್ಟಿಯಲ್ಲಿ ಸೇರಿದರೆ ಮಾತ್ರ, ಅನೇಕ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಜನಪ್ರತಿನಿಧಿಗಳು ಸರ್ಕಾರದ ಗಮನಸೆಳೆದು ಕಾನೂನು ತಿದ್ದುಪಡಿ ಮಾಡಿಸಬೇಕು ಎಂದು ಮನವಿ ಮಾಡಿದರು.


ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್ ಮಾತನಾಡಿ, ರೈತರ ಶ್ರೇಯೋಭಿವೃದ್ಧಿಗಾಗಿ ಸಹಕಾರ ಸಂಘಗಳು ಸ್ಥಾಪನೆಯಾಗಿವೆ. ರೈತರಿಲ್ಲದೆ ಸಹಕಾರ ಸಂಘಗಳಿಲ್ಲ. ರೈತರ ಕತ್ತು ಹಿಸುಕುವ ಕಾನೂನನ್ನು ಕೇಂದ್ರ ಸರ್ಕಾರ ತರಬಾರದು. ಜಿಲ್ಲೆಯಲ್ಲಿ ಹೆಚ್ಚಿನ ರೈತರಿಗೆ ಆಸ್ತಿ ದಾಖಲಾತಿ ಸಮಸ್ಯೆಯಿದೆ. ಸೋಮವಾರಪೇಟೆ ತಾಲೂಕಿನಲ್ಲಿ 53 ಟೆನ್ಯೂರ್‌ಗಳಿವೆ. ದಕ್ಷಿಣ ಕೊಡಗಿನಲ್ಲಿ ಜಮ್ಮಾ ಹಿಡುವಳಿಯಿದೆ. ಹೆಚ್ಚಿನ ರೈತರು ಜಂಟಿ ಖಾತೆಯಲ್ಲಿದ್ದಾರೆ. ಇಲ್ಲಿಯವರೆಗೆ ನಿಯಮ ಸರಳೀಕರಣದಿಂದ ರೈತರಿಗೆ ಸಾಲಸೌಲಭ್ಯ ಸಿಗುತ್ತಿತ್ತು. ಇನ್ನು ಆರ್‌ಬಿಐ ಆಡಿಯಲ್ಲಿ ಸಹಕಾರ ಸಂಘಗಳನ್ನು ಒಳಪಡಿಸಿದರೆ, ಸಾಲಗಾರ ರೈತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಎನ್.ಎಸ್.ಪರಮೇಶ್, ಆಡಳಿತ ಮಂಡಳಿ ನಿರ್ದೇಶಕರಾದ ಎಸ್.ಬಿ.ಭರತ್ ಕುಮಾರ್, ವಿ.ಎನ್.ನಾಗರಾಜ್, ಜಿ.ಪಿ.ಸುನಿಲ್ ಕುಮಾರ್, ಪುಷ್ಪಸುರೇಶ್, ವಾಣಿ ಪ್ರಸಾದ್, ಡಿ.ಪಿ.ಸುಮಿತ್ರ, ಸಿ.ಎ.ಮಮತ, ಸಿ.ಇ.ವೆಂಕಟೇಶ್, ಕೆ.ಬಿ.ದಿನೇಶ್, ಜಿ.ಈ.ಸುರೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಕೆ.ಪೊನ್ನಪ್ಪ ಇದ್ದರು.