ಜಿಲ್ಲೆ

ಸಾಲ ಮರುಪಾವತಿಯಿಂದ ಸಂಘ ಅಭಿವೃದ್ಧಿ

ತಿ.ನರಸೀಪುರ: ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸಿ ಸಹಕಾರ ಸಂಘದ ಅಭಿವೃದ್ಧಿಗೆ ಸಹಕರಿಸುವ ಜತೆಗೆ ಸಂಘದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲೂಕಿನ ನೆರಗ್ಯಾತನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಎಂ. ಜಯಪ್ಪ ಸಲಹೆ ನೀಡಿದರು.


ಗ್ರಾಮದ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 2022-23 ನೇ ಸಾಲಿನ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.
ಸಂಘದಿಂದ ವಿವಿಧ ಉದ್ದೇಶಗಳಿಗೆ ಸಾಲ ಪಡೆದ ಸಂಘದ ಸದಸ್ಯರು, ಸಕಾಲಕ್ಕೆ ಸಾಲ ಮರುಪಾವತಿ ಮಾಡಿದ್ದಲ್ಲಿ ಸಂಘದ ಬೆಳವಣಿಗೆ ಸಾಧ್ಯವಾಗಲಿದೆ. ಹಾಗಾಗಿ, ಸಾಲ ಪಡೆದ ರೈತರು ಸುಸ್ತಿದಾರರಾಗದೆ ಸಕಾಲಕ್ಕೆ ಮರುಪಾವತಿಸಿ ಮತ್ತೆ ಹೆಚ್ಚುವರಿ ಸಾಲ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಮನವಿ ಮಾಡಿದರು.


ಸಭೆಯಲ್ಲಿ ಸೊಸೈಟಿ ವತಿಯಿಂದ ಸೀಮೆಎಣ್ಣೆ ವಿತರಣೆ ಸ್ಥಗಿತಗೊಳಿಸಿರುವ ಬಗ್ಗೆ ಚರ್ಚೆ ನಡೆಸಲಾಯಿತು. ಸೀಮೆಎಣ್ಣೆ ಸರಬರಾಜು ಇಲ್ಲದ್ದರಿಂದ ಸೀಮೆಎಣ್ಣೆ ಕೊಡಲಾಗುತ್ತಿಲ್ಲ. ಸರಬರಾಜಾದರೆ ಎಂದಿನಂತೆ ವಿತರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಸಂಘದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಬಗ್ಗೆ ಚರ್ಚೆ ನಡೆದು, ಉದ್ದೇಶಿತ ಕಾರ್ಯಕ್ಕೆ ಸ್ಥಳಾವಕಾಶ ನೀಡಲು ತೀರ್ಮಾನಿಸಲಾಯಿತು.


ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಸ್.ಧನಂಜಯ್ ವಾರ್ಷಿಕ ವರದಿ ಮಂಡಿಸಿ, ಸಂಘವು 2022-23 ನೇ ಸಾಲಿನಲ್ಲಿ 56,455 ರೂ. ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.

ಸಹಕಾರ ಸಂಘದ ಉಪಾಧ್ಯಕ್ಷ ಸಿದ್ದರಾಜು, ನಿರ್ದೇಶಕರಾದ ದುಂಡಪ್ಪ, ಬಸವರಾಜಪ್ಪ, ನಾಗೇಶ್, ಬಸವರಾಜು, ಎಂ.ಪುಟ್ಟಸ್ವಾಮಿ, ಎಂ.ಶಿವರಾಜು, ಡಿ.ಮಂಟೇಸ್ವಾಮಿ, ಶಿವಕುಮಾರ್, ಕೆಂಪಮ್ಮಣಿ, ಸುಂದ್ರಮ್ಮ, ಮುಖಂಡರಾದ ಕೋಣಗಳ್ಳಿ ಬಸವರಾಜಪ್ಪ, ಪ್ರಭುಸ್ವಾಮಿ, ಮುಡುಕನಪುರ ಕೂಸಪ್ಪ, ಮಹದೇವಪ್ಪ, ಎಂ.ಎಲ್.ಹುಂಡಿ ಸಿದ್ದವೀರಸ್ವಾಮಿ, ಚಿಟಗಯ್ಯನಕೊಪ್ಪಲು ನಂಜುಂಡೇಗೌಡ, ರವಿ, ನಾಗಲಗೆರೆ ಮಹದೇವ, ಮಹೇಶ್, ನೆರಗ್ಯಾತನಹಳ್ಳಿ ಚಂದ್ರು, ನಟರಾಜು, ಗಿರೀಶ್, ನಾಗಪ್ಪ, ಡೇರಿ ಗುರುಮೂರ್ತಿ, ತಾ.ಪಂ.ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಸಂಘದ ಮೇಲ್ವಿಚಾರಕ ಎನ್.ಎಂ.ರಮೇಶ್, ಎಂ.ಮನು, ಎನ್.ಮಮತಾ ಸೇರಿದಂತೆ ಗ್ರಾಮಸ್ಥರು ಇದ್ದರು.