ಜಿಲ್ಲೆ

ಸಾಲ ಮರುಪಾವತಿಗೆ ಆಧ್ಯತೆ ನೀಡಿ, ರೈತರಿಗೆ ಮಾಜಿ ಸಂಸದ ನಾರಾಯಣಸ್ವಾಮಿ ಸಲಹೆ, ದೇವನಹಳ್ಳಿ ಪಿಎಲ್‌ಡಿ ಬ್ಯಾಂಕಿಗೆ 46.74 ಲಕ್ಷ ರೂ. ಲಾಭ

ದೇವನಹಳ್ಳಿ: ಪಟ್ಟಣದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸ್ವಂತ ಕಟ್ಟಡ ಹೊಂದಿರುವ ಜತೆಗೆ ವಾಣಿಜ್ಯ ಸಂಕಿರ್ಣ ನಿರ್ಮಿಸಿ ವಾರ್ಷಿಕ 90 ಲಕ್ಷ ರೂ. ಆದಾಯ ಬರುವಂತೆ ಮಾಡಿರುವುದು ಸಂಘದ ಕಾರ್ಯಕಾರಿ ಮಂಡಳಿ ಪರಿಶ್ರಮಕ್ಕೆ ಸಾಕ್ಷಿ ಎಂದು ಮಾಜಿ ಸಂಸದ, ಸಹಕಾರಿ ರತ್ನ ಪುರಸ್ಕೃತ ಸಿ.ನಾರಾಯಣಸ್ವಾಮಿ ಪ್ರಶಂಶಿಸಿದರು.

ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಬ್ಯಾಂಕಿನಿಂದ ಪಡೆದ ಸಾಲ ಮರುಪಾವತಿಸುವುದು ಮೊದಲ ಆದ್ಯತೆಯಾಗಬೇಕು ಎಂದರು.

ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಎ.ಸಿ. ನಾಗರಾಜ್ ಮಾತನಾಡಿ, ಕಾಲಕಾಲಕ್ಕೆ ಷೇರು ಮೊತ್ತ ಹೆಚ್ಚಳ ಮಾಡಿಕೊಳ್ಳಲು ಅವಕಾಶವಿದ್ದರೂ 500 ರಿಂದ ಏಕಾಏಕಿ ಒಂದು ಸಾವಿರ ರೂಪಾಯಿಗೆ ಷೇರು ಹೆಚ್ಚಳ ಮಾಡಿದ್ದು, ಸದಸ್ಯರಿಗೆ ನೋೀಟಿಸ್ ನೀಡಿ ತಿಳಿಸಬೇಕು ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎನ್.ಸೊಣ್ಣಪ್ಪ ಮಾತನಾಡಿ, ಪಡೆದ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿ ಹಲವು ರೈತರು ಸಾಲ ತೀರಿಸದೆ ಸುಸ್ಥಿದಾರರಾಗಿದ್ದಾರೆ. ಈ ಮನೋಭಾವ ಬದಲಾಗಬೇಕು ಎಂದರು.

ಬ್ಯಾಂಕಿನ ವ್ಯವಸ್ಥಾಪಕ ಕೆ.ವಿ.ರಾಜೇಂದ್ರ ಪ್ರಸಾದ್, ವಾರ್ಷಿಕ ವರದಿ ಮಂಡಿಸಿದರು.

ಬ್ಯಾಂಕಿನ ಅಧ್ಯಕ್ಷ ಜೊನ್ನಹಳ್ಳಿ ಮುನಿರಾಜು ಮಾತನಾಡಿ, ಬ್ಯಾಂಕಿನಲ್ಲಿ 2 ವರ್ಷಗಳಿಂದ ಕರೊನಾದಿಂದ ಸಾಲ ವಸೂಲಾತಿಗೆ ತಡೆಯಾಗಿತ್ತು. ಈ ವರ್ಷ ಶೇ.54.49 ಸಾಲ ವಸೂಲಾತಿಯಾಗಿದೆ. ಆಡಳಿತ ಮಂಡಳಿಯ ಸಹಕಾರದಿಂದ 7 ಲಕ್ಷ ಬಾಡಿಗೆ ಬರುವಂತಹ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. 2020-21ನೇ ಸಾಲಿಗೆ 46.74 ಲಕ್ಷ ರೂ. ಲಾಭ ಬಂದಿದ್ದು , 2021-22 ನೇ ಸಾಲಿಗೆ 70.75 ಲಕ್ಷ ರೂ. ಅಂದಾಜು ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದರು.

ಬೆಂ.ಹಾಲು ಒಕ್ಕೂಟದ ನಿರ್ದೇಶಕ ಬಿ.ಶ್ರೀನಿವಾಸ್, ಪುರಸಭೆ ಸದಸ್ಯ ಜಿ.ಎ.ರವೀಂದ್ರ, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ಸಿ.ಎಂ. ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಉಪಾಧ್ಯಕ್ಷೆ ಆಶಾರಾಣಿ ಮಂಜುನಾಥ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ನಾಗೇಶ್, ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮೀನಾರಾಯಣ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ ಉಪಸ್ಥಿತರಿದ್ದರು.